ಮಾಜಿ ಪ್ರಾಥಮಿಕ,ಪ್ರೌಢ ಶಿಕ್ಷಣ ಸಚಿವ ಎಚ್.ಗೋವಿಂದೇ¸ಗೌಡ ¸ಸ್ಥಿತಿ ಚಿಂತಾಜನಕ
ಚಿಕ್ಕಮಗಳೂರು, ಜ.4: ಮಾಜಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಚ್.ಜಿ.ಗೋವಿಂದೇಗೌಡ (90) ತೀವ್ರ ಚಿಂತಾಜನಕ ಸ್ಥಿತಿಯಲ್ಲಿದ್ದು, ಕೊಪ್ಪ ತಾಲೂಕಿನ ಗುಣವಂತೆ ಗ್ರಾಮದಲ್ಲಿ ಅವರ ಸ್ವಗೃಹದಲ್ಲಿ ಕೃತಕ ಉಸಿರಾಟದೊಂದಿಗೆ ಜೀವನ್ಮರಣದೊಂದಿಗೆ ಸೆಣಸಾಡುತ್ತಿದ್ದಾರೆ.
ಸೋಮವಾರ ನಸುಕಿನಲ್ಲಿ ಕೊಂಚ ಅಸ್ವಸ್ಥರಾದಂತೆ ಕಂಡು ಬಂದ ಎಚ್.ಜಿ.ಗೋವಿಂದೇಗೌಡರನ್ನು ತಕ್ಷಣ ಕೊಪ್ಪ ಸರಕಾರಿ ಆಸ್ಪತ್ರೆಯ ವೈದ್ಯರು ಪರೀಕ್ಷೆ ನಡೆಸಿ ಔಷಧಿ ನೀಡಿದ ಬಳಿಕ ಚೇತರಿಸಿಕೊಂಡಿದ್ದರು. ಅನಂತರ ಮಧ್ಯಾಹ್ನದ ವೇಳೆ ಇನ್ನಷ್ಟು ತೊಂದರೆ ಅನುಭವಿಸಿದರು. ಸಂಜೆ 4 ಗಂಟೆಯ ವೇಳೆಗೆ ತೀವ್ರ ಅಸ್ವಸ್ಥರಾದಂತೆ ಕಂಡು ಬಂದಿದ್ದಾರೆ ಎಂದು ಅವರನ್ನು ಪರೀಕ್ಷಿಸುತ್ತಿರುವ ವೈದ್ಯರಾದ ಡಾ. ಜಿ.ನೀಲಕಂಠಪ್ಪರವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಸದ್ಯ ಗೋವಿಂದೇಗೌಡರು ಕೃತಕ ಉಸಿರಾಟದ ಮೂಲಕ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ. ಕಳೆದ ಸುಮಾರು 2 ವರ್ಷಗಳ ಹಿಂದೆ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದರು. ಆ ತನಕ ಚೆನ್ನಾಗಿ ಓಡಾಡುತ್ತಿದ್ದ ಗೋವಿಂದೇಗೌಡರು ನಂತರ ಕೊಂಚ ಅಸ್ವಸ್ಥಗೊಂಡಂತೆ ಕಾಣಿಸಿಕೊಂಡಿದ್ದರು. ಬಿದ್ದ ನಂತರ ಅವರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಸದ್ಯ ಆಹಾರ ಸೇವನೆಗೆ ತೊಂದರೆಯಾಗುತ್ತಿದ್ದು, ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಕೃತಕ ಉಸಿರಾಟವನ್ನು ಹೊರತುಪಡಿಸಿದರೆ ಅವರ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯೂ ಕಾಣಿಸುತ್ತಿಲ್ಲ. ಸೀರಿಯಸ್ ಕಂಡೀಷನ್‌ನಲ್ಲಿರುವ ಸುದ್ದಿ ತಿಳಿಯುತ್ತಿದ್ದಂತೆ ಬಂಧುಗಳ ಸಹಿತ ನೆರೆಹೊರೆಯವರು, ಅಭಿಮಾನಿಗಳು ಅವರ ಮನೆಯತ್ತ ದೌಡಾಸುತ್ತಿದ್ದಾರೆ.
ಎರಡು ಬಾರಿ ಶಾಸಕರಾಗಿರುವ ಎಚ್.ಜಿ.ಗೋವಿಂದೇಗೌಡರು ಜೆ.ಎಚ್.ಪಟೇಲ್ ಸರಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2004ರಲ್ಲಿ ತುಮಕೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಗೋವಿಂದೇಗೌಡರ ಪತ್ನಿ ಶಾಂತಾ ಕೂಡ ಅನಾರೋಗ್ಯ ಪರಿಸ್ಥಿತಿಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.