ಲೆ.ಕ. ನಿರಂಜನ್‌ಕುಮಾರ್ ಅಂತಿಮ ದರ್ಶನಕ್ಕೆ ಜನಸಾಗರ
ವೀರಯೋಧನ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ: ಸಿಎಂ
ಬೆಂಗಳೂರು, ಜ.4: ಪಂಜಾಬ್‌ನ ಪಠಾಣ್‌ಕೋಟ್ ವಾಯುನೆಲೆ ಬಳಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ವೀರಮರಣವನ್ನಪ್ಪಿದ ಲೆಫ್ಟಿನೆಂಟ್ ಕರ್ನಲ್ ನಿರಂಜನ್‌ಕುಮಾರ್ ಅವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂತು.
ನಿರಂಜನ್‌ಕುಮಾರ್ ಪಾರ್ಥಿವ ಶರೀರವನ್ನು ರವಿವಾರ ಸಂಜೆ ದೊಮ್ಮಲೂರುನಲ್ಲಿರುವ ಕಮಾಂಡೋ ಆಸ್ಪತ್ರೆಗೆ ತರಲಾಗಿತ್ತು. ಆನಂತರ, ದೊಡ್ಡಬೊಮ್ಮಸಂದ್ರದಲ್ಲಿರುವ ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಿ, ನ್ಯೂ ಬಿಇಎಲ್ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದ ವೀರಪ್ಪ ಮೊಯ್ಲಿ, ಸಚಿವ ಡಾ.ಎಚ್.ಸಿ. ಮಹದೇವಪ್ಪ,ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಸೇರಿದಂತೆ ಅನೇಕ ಗಣ್ಯರು ಹುತಾತ್ಮ ಯೋಧನಿಗೆ ಅಂತಿಮ ನಮನಗಳನ್ನು ಸಲ್ಲಿಸಿದರು.
ಇದಲ್ಲದೆ, ಸಾರ್ವಜನಿಕರು, ಸಂಬಂಧಿಕರು, ಸಹಪಾಠಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಮಂದಿ ನಿರಂಜನ್‌ಕುಮಾರ್ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪಡೆದರು.
ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಆನಂತರ, ಪಾರ್ಥಿವ ಶರೀರವನ್ನು ನಿರಂಜನ್‌ಕುಮಾರ್ ಹುಟ್ಟೂರು ಕೇರಳದ ಪಾಲಕ್ಕಾಡ್‌ಗೆ ಅಂತಿಮ ಸಂಸ್ಕಾರಕ್ಕಾಗಿ ಕೊಂಡೊಯ್ಯಲಾಯಿತು.
ಡಾ.ಜಿ.ಪರಮೇಶ್ವರ್ ಸಂತಾಪ: ಪಂಜಾಬ್‌ನಪಠಾಣ್‌ಕೋಟ್ ವಾಯುನೆಲೆಯಲ್ಲಿ ಉಗ್ರರು ದಾಳಿ ನಡೆಸಿದಾಗ ಭಾರತೀಯ ಸೇನಾ ಕಾರ್ಯಾಚರಣೆಯಲ್ಲಿ ಹತರಾದ ವೀರಯೋಧ ಲೆಫ್ಟಿನೆಂಟ್ ಕರ್ನಲ್ ನಿರಂಜನ್‌ಕುಮಾರ್ ನಿಧನಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಉಗ್ರರು ವಾಯುನೆಲೆಯನ್ನು ಗುರಿಯಾಗಿಟ್ಟುಕೊಂಡು ನಡೆಸಿದ ಪಠಾಣ್ ಕೋಟ್ ದಾಳಿಯಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು, ಹೋರಾಟ ಮಾಡಿ ವೀರ ಮರಣ ಹೊಂದಿದ ನಮ್ಮ ವೀರಸೈನಿಕರಿಗೆ ತನ್ನ ದೊಡ್ಡ ಸಲಾಮ್ ಎಂದು ಪರಮೇಶ್ವರ್ ತಮ್ಮ ಸಂತಾಪಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.
ದೇಶಕ್ಕಾಗಿ ಪ್ರಾಣತೆತ್ತ ಬೆಂಗಳೂರಿನ ಲೆಫ್ಟಿನೆಂಟ್ ಕರ್ನಲ್ ನಿರಂಜನ್‌ಕುಮಾರ್ ಅವರ ನಿಧನದಿಂದ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನೂ ಅವರ ಕುಟುಂಬಕ್ಕೆ ನೀಡಲಿ ಹಾಗೂ ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲೆಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬದವರು ಧೈರ್ಯ ಕಳೆದುಕೊಳ್ಳಬಾರದು, ನಮ್ಮ ಸರಕಾರ ನಿಮ್ಮ ಜೊತೆ ಇದೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಯೋಧರ ಸಾವು ಖೇದಕರ: ಪಾಕಿಸ್ತಾನ ಪ್ರಚೋದಿತ ಉಗ್ರರ ದಾಳಿಯಲ್ಲಿ ನಮ್ಮ ಯೋಧರು ಮೃತಪಟ್ಟಿರುವುದು ಅತ್ಯಂತ ಖೇದಕರ ಸಂಗತಿಯಾಗಿದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಭಾರತೀಯರ ಪಾಲಿಗೆ ಇದೊಂದು ಅತ್ಯಂತ ದುರ್ದೈವದ ದಿನ. ದೇಶವನ್ನು ಹಾಗೂ ನಮ್ಮನ್ನೆಲ್ಲಾ ರಕ್ಷಿಸಿ ಪ್ರಾಣ ಕಳೆದುಕೊಂಡಿರುವ ವೀರ ಯೋಧನ ಕಾರ್ಯ ಶ್ಲಾಘನೀಯವಾದದ್ದು. ನಿರಂಜನ್ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಹೇಳಿದರು.
ಪಾಕ್ ಪ್ರಚೋದಿತ ಈ ದಾಳಿಯು ಅತ್ಯಂತ ಖಂಡನೀಯ. ನಮ್ಮ ಸೈನಿಕರು ಆ ದಾಳಿಯನ್ನು ವಿಫಲಗೊಳಿಸುವ ಮೂಲಕ ತಕ್ಕ ಪಾಠವನ್ನೇ ಕಲಿಸಿದ್ದಾರೆ. ಕಾರ್ಯಾಚರಣೆಯಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ನಡೆಸಿದ ಯೋಧರಿಗೆ ನಮ್ಮದೊಂದು ದೊಡ್ಡ ಸಲಾಮ್ ಎಂದು ಸದಾನಂದಗೌಡ ತಿಳಿಸಿದರು.
ಅಲ್ಲದೆ, ಕೇಂದ್ರ ಸರಕಾರದಿಂದ ಹುತಾತ್ಮ ನಿರಂಜನ್‌ಕುಮಾರ್ ಕುಟುಂಬಕ್ಕೆ ಸರ್ವ ರೀತಿಯಲ್ಲೂ ಸಹಕಾರ ಕೊಡಿಸಲಾಗುವುದು ಎಂದು ಸದಾನಂದಗೌಡ ಭರವಸೆ ನೀಡಿದರು.