ಆಧುನಿಕ ತಾಂತ್ರಿಕತೆಯ ಮಾಹಿತಿ ಸಕಾಲದಲ್ಲಿ ರೈತರಿಗೆ ತಲುಪಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಜ. 5: ಮಾಹಿತಿ ಮತ್ತು ತಂತ್ರಜ್ಞಾನದ ಹೊಸ-ಹೊಸ ಆವಿಷ್ಕಾರಗಳು ರೈತರಿಗೆ ಕಾಲಕಾಲಕ್ಕೆ ತಲುಪಬೇಕು. ಅಲ್ಲದೆ, ಹವಾಮಾನ ವೈಪರೀತ್ಯ, ಮಳೆ ಮಾಹಿತಿ, ಮಾರುಕಟ್ಟೆ ವಿವರ ಹಾಗೂ ಆಧುನಿಕ ತಾಂತ್ರಿಕತೆ ಸರಳವಾಗಿ ರೈತರಿಗೆ ತಲುಪಿಸುವ ವ್ಯವಸ್ಥೆಯನ್ನು ರೂಪಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಮಂಗಳವಾರ ಇಲ್ಲಿನ ಬಳ್ಳಾರಿ ರಸ್ತೆಯಲ್ಲಿನ ಕೃಷಿ ವಿಶ್ವ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಜಿಸಿಆರ್‌ಎ 8ನೆ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಸಿ ರೈತರಿಗೆ ಕಾಲಕಾಲಕ್ಕೆ ಸೂಕ್ತ ಮಾಹಿತಿ ನೀಡಲು ಕ್ರಮಕೈಗೊಳ್ಳಬೇಕು ಎಂದರು.
ರೈತರಿಗೆ ಅಗತ್ಯ ಮೂಲಸೌಲಭ್ಯ ಮತ್ತು ತಂತ್ರಜ್ಞಾನದ ಪೂರೈಕೆ ಸಮರ್ಪಕವಾಗಿಲ್ಲ. ಕೃಷಿ-ಕಾರ್ಮಿಕರ ಸಂಖ್ಯೆ ಕಡಿಮೆಯಾಗಿರುವ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕೃಷಿಯಲ್ಲಿ ಸುಸ್ಥಿರ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಸಿದ್ದರಾಮಯ್ಯ ತಿಳಿಸಿದರು.
ರೈತರಿಗೆ ಯಾವ ಬೆಳೆ ಬೆಳೆಯಬೇಕು, ಕೃಷಿ ಉತ್ಪನ್ನಗಳನ್ನು ಯಾವ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕೆಂಬ ಕುರಿತು ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗಲಿದೆ ಮತ್ತು ಕೃಷಿಕರ ನಡುವೆ ಪರಸ್ಪರ ಮಾಹಿತಿ ವಿನಿಮಯದಿಂದ ತಂತ್ರಜ್ಞಾನದ ಸದ್ಬಳಕೆ ಆಗುತ್ತದೆ ಎಂದ ಅವರು, ಇದರಿಂದ ರೈತರಿಗೂ ಅನುಕೂಲ ಆಗಲಿದೆ ಎಂದರು.
ಕೃಷಿ ಕ್ಷೇತ್ರದಲ್ಲಿ ಯಾವುದೇ ಮಾಹಿತಿ ವಿಳಂಬ ಆಗುವುದರಿಂದ ಪ್ರಯೋಜನ ಆಗದು. ಆ ಹಿನ್ನೆಲೆಯಲ್ಲಿ ಕಾಲಕಾಲಕ್ಕೆ ಕೃಷಿ ಚಟುವಟಿಕೆಗಳ ನಡೆಯಬೇಕು ಎಂದ ಅವರು, ಸಂಕಷ್ಟದಲ್ಲಿರುವ ರೈತರಿಗೆ ಆಧುನಿಕ ತಂತ್ರಜ್ಞಾನ ಮೂಲಕ ಸೂಕ್ತ ಸಲಹೆ ನೀಡಿದರೆ ಕೃಷಿಯನ್ನು ರೈತ ಲಾಭದಾಯಕ ಮಾಡಿಕೊಳ್ಳಲು ಸಾಧ್ಯ ಎಂದರು.
ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗಳು ಆಗುತ್ತಿದ್ದು ರೈತರಿಗೆ ತಲುಪಬೇಕು. ಇದರಿಂದ ಹೆಚ್ಚಿನ ಉತ್ಪಾದನೆ ಆಗಲಿದೆ. ಆ ಮೂಲಕ ಆಹಾರ ಭದ್ರತೆಯನ್ನು ಕಾಯ್ದುಕೊಳ್ಳಲು ಸಾಧ್ಯ ಎಂದ ಅವರು, ಈ ಸಮ್ಮೇಳನದಿಂದ ಅರ್ಥಪೂರ್ಣ ವಿಚಾರಗಳು ಮೂಡಿಬರಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಕೃಷಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಭೂಮಿ ಅಳತೆ ಮತ್ತು ಕಿಸಾನ್ ಯೋಜನೆಗಳನ್ನು ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ರಾಜ್ಯ ಸರಕಾರ ಯೋಜನೆ ರೂಪಿಸಿದ್ದು, ನಮ್ಮ ರಾಜ್ಯದ ಯೋಜನೆಗಳನ್ನು ಕೇಂದ್ರ ಸರಕಾರ ರಾಷ್ಟ್ರಮಟ್ಟದಲ್ಲಿ ಜಾರಿಗೆ ತರಲು ಚಿಂತಿಸಿದೆ ಎಂದರು.
ಕಾರ್ಮಿಕ ಸಚಿವ ಪರಮೇಶ್ವರ್ ನಾಯ್, ಕೃಷಿ ವಿವಿ ಕುಲಪತಿ ಶಿವಣ್ಣ, ಯುನೆಸ್ಕೋ ವಿಜ್ಞಾನ ಸಮುದಾಯ ವಿಭಾಗದ ನಿರ್ದೇಶಕ ಡಾ.ಇಂದ್ರಜೀತ್ ಬ್ಯಾನರ್ಜಿ, ಐಸಿಎಆರ್‌ನ ಉಪ ನಿರ್ದೇಶಕ ಡಾ.ಎ.ಕೆ.ಸಿಂಗ್, ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪುಷ್ಪಾ, ಆಸ್ಟ್ರೇಲಿಯಾದ ಸಂವಹನ ಸಂಶೋಧನಾ ಸಂಸ್ಥೆ ಅಧ್ಯಕ್ಷ ಡಾ.ದೀಪಕ್ ಮತ್ತಿತರರು ಉಪಸ್ಥಿತರಿದ್ದರು.