×
Ad

ನೂತನ ಲೋಕಾಯುಕ್ತ; ನ್ಯಾ.ಎಸ್.ಆರ್.ನಾಯಕ್ ಹೆಸರು ಶಿಫಾರಸಿಗೆ ಸಿದ್ಧತೆ?

Update: 2016-01-05 22:45 IST

ಬೆಂಗಳೂರು, ಜ.5: ರಾಜ್ಯ ಸರಕಾರವು ನೂತನ ಲೋಕಾಯುಕ್ತ ಹುದ್ದೆಗೆ ನ್ಯಾ. ಎಸ್.ಆರ್.ನಾಯಕ್ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ನೂತನ ಲೋಕಾಯುಕ್ತ ನೇಮಕಾತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ನ್ಯಾ.ಎಸ್.ಆರ್.ನಾಯಕ್ ಹೆಸರನ್ನು ಶಿಫಾರಸು ಮಾಡಿದ್ದರು.
ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನಿವೃತ್ತರಾಗಿರುವ ಎಸ್.ಆರ್. ನಾಯಕ್, ರಾಜ್ಯ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಾಗಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕನ್ನಡಿಗರೊಬ್ಬರನ್ನು ಲೋಕಾಯುಕ್ತಕ್ಕೆ ನೇಮಕ ಮಾಡಬೇಕು ಎಂಬ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ನ್ಯಾ.ಎಸ್.ಆರ್.ನಾಯಕ್ ಹೆಸರನ್ನು ಶಿಫಾರಸು ಮಾಡಲು ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ. ಆದರೆ, ಪ್ರತಿಪಕ್ಷಗಳ ಮುಖಂಡರು, ರಾಜ್ಯ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅವರು ಸುಪ್ರೀಂಕೋರ್ಟ್ ನಿವೃತ್ತ ನ್ಯಾ.ವಿಕ್ರಮ್‌ಜೀತ್ ಸೇನ್ ಪರವಾಗಿ ಒಲವು ಹೊಂದಿದ್ದಾರೆ. ಅಲ್ಲದೆ ವಿರೋಧ ಪಕ್ಷದ ನಾಯಕ ಈಶ್ವರಪ್ಪ ಮತ್ತು ಸಾಮಾಜಿಕ ಕಾರ್ಯಕರ್ತ ಎಸ್.ಆರ್. ಹಿರೇಮಠ್, ಎಸ್.ಆರ್. ನಾಯಕ್ ಪ್ರಾಮಾಣಿಕರಲ್ಲ, ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ನ್ಯಾ.ವಿಕ್ರಮ್‌ಜೀತ್ ಸೇನ್‌ರನ್ನು ಲೋಕಾಯುಕ್ತ ಹುದ್ದೆಗೆ ಪರಿಗಣಿಸಲು ಮುಕ್ತ ಮನಸು ಹೊಂದಿದ್ದಾರೆ. ಆದರೆ, ಈ ನಡುವೆ ನ್ಯಾ.ಎಸ್.ಆರ್.ನಾಯಕ್ ಹೆಸರು ಚಾಲ್ತಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News