ಬಡವರಿಗೆ ಪುನರ್ವಸತಿ ಕಲ್ಪಿಸಲು ಆಗ್ರಹಿಸಿ ಧರಣಿ
ಬೆಂಗಳೂರು, ಜ. 5: ಧಾರವಾಡದ ಶ್ರೀರಾಮನಗರ ಸರಕಾರಿ ಭೂಮಿಯಲ್ಲಿ ಹಲವು ವರ್ಷಗಳಿಂದ ವಾಸವಿದ್ದ ಬಡವರ ಎತ್ತಂಗಡಿ ಖಂಡಿಸಿ, ಅದೇ ಸ್ಥಳದಲ್ಲಿ ಪುನರ್ವಸತಿ ಕಲ್ಪಿಸಲು ಆಗ್ರಹಿಸಿ ಕರ್ನಾಟಕ ಸಮತಾ ಸೈನಿಕ ದಳದ ನೂರಾರು ಕಾರ್ಯಕರ್ತರು ಇಲ್ಲಿನ ಸ್ವಾತಂತ್ರ ಉದ್ಯಾನ ವನದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.
ಸಂಘದ ಅಧ್ಯಕ್ಷ ಚನ್ನಕೃಷ್ಣಪ್ಪ ಮಾತನಾಡಿ, ಇಲ್ಲಿನ ಶ್ರೀರಾಮನಗರದಲ್ಲಿ 2001ರಲ್ಲಿ 900 ಕುಟುಂಬಗಳನ್ನು ಧಾರವಾಡ ಜಿಲ್ಲಾಡಳಿತ ನಿವಾಸಿಗಳಿಗೆ ಯಾವುದೇ ಮುನ್ಸೂಚನೆ ನೀಡದೆ ಒಕ್ಕಲೆಬ್ಬಿಸಿತ್ತು. ಆ ಬಳಿಕ ಪುನರ್ವಸತಿ ಭರವಸೆ ನೀಡಿ ಇದೀಗ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಧಾರವಾಡದಲ್ಲೇ ಐಐಟಿ ಸ್ಥಾಪಿಸಲು ನೂರಾರು ಎಕರೆ ಭೂಮಿ ಮಂಜೂರು ಮಾಡಿರುವ ರಾಜ್ಯ ಸರಕಾರ, ಹಲವು ವರ್ಷಗಳಿಂದ ಬಗರ್ ಹುಕುಂ ಸಾಗುವಳಿಗೆ ಮಾಡುತ್ತಿರುವ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಲು ಮೀನ ಮೇಷ ಎಣಿಸುತ್ತಿದೆ. ಫಾರಂ 50, 53ರಡಿ ಅರ್ಜಿ ಸಲ್ಲಿಸಿರುವ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು.ರಾಜ್ಯದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ತರಬೇತಿ ಪಡೆದ ಗೌರವ ಶಿಕ್ಷಕ ಶೋಷಣೆ ನಿಲ್ಲಿಸಿ, ಅವರಿಗೆ ಕನಿಷ್ಠ ವೇತನ ಹಾಗೂ ಉದ್ಯೋಗ ಖಾಯಂ ಗೊಳಿಸಲು ಸರಕಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.