ಈ ನಿಷೇಧ ಎಷ್ಟು ಸರಿ?

Update: 2016-01-05 17:59 GMT

 ಮದ್ಯಪಾನ ಕೆಟ್ಟದು ಎನ್ನುವುದನ್ನು ಇಡೀ ಜಗತ್ತು ಬಹುಸಂಖ್ಯೆಯಲ್ಲಿ ಒಪ್ಪಿಕೊಂಡಿದೆ. ಕೆಟ್ಟದ್ದನ್ನು ಬರೇ ಮಹಾತ್ಮರ ಜಯಂತಿಯ ದಿನವಷ್ಟೇ ಬದಿಗಿಟ್ಟು, ಉಳಿದ ದಿನ ಅದಕ್ಕೆ ಪರವಾನಿಗೆ ನೀಡುವುದು ದ್ವಂದ್ವನೀತಿಯಾಗುತ್ತದೆ. ಮದ್ಯಪಾನ ಕೆಟ್ಟದ್ದು ಎಂದಾದರೆ ಎಲ್ಲ ದಿನಗಳಲ್ಲೂ ಅದು ನಿಷೇಧವಾಗಬೇಕು. ಇದೇ ಸಂದರ್ಭದಲ್ಲಿ ಕೆಲವು ಜಯಂತಿಯಂದು ಅನಗತ್ಯ ರಜೆಗಳನ್ನು ಘೋಷಿಸಿ ಸರಕಾರ ಕೆಲವು ಜಾತಿ, ಸಮುದಾಯಗಳನ್ನು ಓಲೈಸುವ ಪ್ರಯತ್ನ ಮಾಡುತ್ತಿದೆ. ಕೆಲವು ನಿರ್ದಿಷ್ಟ ಹಬ್ಬ ಮತ್ತು ರಾಷ್ಟ್ರೀಯ ದಿನಗಳನ್ನು ಹೊರತು ಪಡಿಸಿ, ಯಾರದೇ ಜಯಂತಿಗಳಿಗೆ ಅನಗತ್ಯ ರಜೆಗಳನ್ನು ನೀಡುವುದರಿಂದಲೂ ಸರಕಾರ ಹಿಂದೆ ಸರಿಯಬೇಕು. ಆ ಮೂಲಕವೇ ಆ ಮಹನೀಯರಿಗೆ ಸರಕಾರ ಗೌರವ ಸಲ್ಲಿಸಿದಂತಾಗುತ್ತದೆ.

ಹಿ  ಂಸೆ ಮಹಾಪರಾಧ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಅದು ಕೇವಲ ಒಂದು ದಿನಕ್ಕೆ ಸಂಬಂಧ ಪಟ್ಟ ನಿಯಮವಲ್ಲ. ಹಿಂಸೆ ತಪ್ಪು ಎಂದಾದರೆ ಅದು ಗಾಂಧಿಜಯಂತಿಯಂದು ಮಾಡಿದರೂ ತಪ್ಪು, ಉಳಿದ ದಿನಗಳಲ್ಲಿ ಮಾಡಿದರೂ ತಪ್ಪೇ. ಆದರೆ ಭಾರತದಲ್ಲಿ ಒಂದು ಅಘೋಷಿತ ಕಾನೂನು ಕೆಲವು ದಿನಗಳಲ್ಲಿ ಮಾತ್ರ ಹಿಂಸೆಯ ಕುರಿತಂತೆ ಕಳವಳ ವ್ಯಕ್ತಪಡಿಸುತ್ತದೆ. ಈ ಕಾನೂನಿನ ಪಾಲಿಗೆ ಹಿಂಸೆಯೆಂದರೆ ಜನರು ಮಾಂಸಾಹಾರ ಸೇವಿಸುವುದು. ಆದುದರಿಂದಲೇ ಬುದ್ಧ ಜಯಂತಿ, ಗಾಂಧಿ ಜಯಂತಿ, ಹುತಾತ್ಮರ ದಿನ, ಮಹಾವೀರ ಜಯಂತಿ, ಡಾ. ಅಂಬೇಡ್ಕರ್ ಜಯಂತಿ ಮೊದಲಾದ ದಿನಗಳಲ್ಲಿ ಪ್ರಾಣಿವಧೆ, ಮಾಂಸ ಮಾರಾಟವನ್ನು ನಿಷೇಧಿಸುತ್ತಾ ಬಂದಿದೆ. ಇತ್ತೀಚಿನ ದಿನಗಳಲ್ಲಿ ಇದು ರಾಜಕೀಯ ರೂಪ ಪಡೆದುಕೊಂಡಿದ್ದು ಸಾಕಷ್ಟು ವಿವಾದಕ್ಕೂ ಕಾರಣವಾಗಿದೆ. ‘ಮಾಂಸಾಹಾರ ಸೇವಿಸುವುದು’ ಹಿಂಸೆ ಎಂದು ನಮ್ಮ ಕಾನೂನು ಭಾವಿಸುತ್ತಿದೆಯಾದರೆ, ವರ್ಷಕ್ಕೊಮ್ಮೆ ಮಾತ್ರ ಅದಕ್ಕೆ ಕಡಿವಾಣ ಬಿಗಿದು ಏನು ಪ್ರಯೋಜನವಿದೆ? ಅದು ತಪ್ಪು ಎಂದಾದರೆ ಎಲ್ಲ ಸಂದರ್ಭದಲ್ಲೂ ತಪ್ಪೇ ಆಗಿದೆ. ಆದರೆ ಮಾಂಸಾಹಾರ ಈ ಜಗತ್ತಿನ ಶೇ. 90ರಷ್ಟು ಜನರ ಮುಖ್ಯ ಆಹಾರ. ಬದುಕಿನ ಆರೋಗ್ಯ, ಪೌಷ್ಟಿಕತೆಯಲ್ಲಿ ಮಾಂಸಾಹಾರಕ್ಕೆ ನಾವು ಅಗ್ರಸ್ಥಾನವನ್ನು ನೀಡುತ್ತಾ ಬಂದಿದ್ದೇವೆ. ಜೊತೆಗೆ ಶೇ. 45ರಷ್ಟು ಜನರು ಅಪೌಷ್ಟಿಕತೆಯಿಂದ ನರಳುತ್ತಿರುವ ದೇಶದಲ್ಲಿ, ಬಡತನ, ಹಸಿವಿನಿಂದ ಸಾಯುತ್ತಿರುವ ಜನರಿರುವ ದೇಶದಲ್ಲಿ ಮಾಂಸಾಹಾರಕ್ಕೆ ಹೆಚ್ಚು ಹೆಚ್ಚು ಪ್ರೋತ್ಸಾಹ ಸಿಗಬೇಕಾಗಿದೆ ಮತ್ತು ಅದನ್ನು ಧನಾತ್ಮಕವಾಗಿ ನೋಡಬೇಕಾಗಿದೆ. ಮನುಷ್ಯ ಆಹಾರಕ್ಕಾಗಿ ಪ್ರಾಣಿಯನ್ನು ಹತ್ಯೆಗೈಯುವುದನ್ನು ಯಾವತ್ತೂ ಹಿಂಸೆ ಎಂದು ಜಗತ್ತು ತಿಳಿದಿಲ್ಲ. ಹಾಗೆ ನೋಡಿದರೆ ಮನುಷ್ಯ ಹಸಿವಿನಿಂದ ಸಾಯುವುದು ಅಥವಾ ಈ ಜಗತ್ತಿನಲ್ಲಿ ಹೊಟ್ಟೆಗಿಲ್ಲದೆ ಕೋಟ್ಯಂತರ ಮಂದಿ ಅಪೌಷ್ಟಿಕತೆಯಿಂದ ನರಳುತ್ತಿರುವುದು ಹಿಂಸೆ. ಇಂತಹ ಸಂದರ್ಭದಲ್ಲಿ ಅವರ ಬಾಯಿಯಿಂದ ಆಹಾರವನ್ನು ಕಸಿದುಕೊಳ್ಳುವುದು ಮಹಾ ಹಿಂಸೆ. ಈ ಹಿನ್ನೆಲೆಯಲ್ಲಿ ಭಾರತ ಮಾಂಸಾಹಾರದ ಕುರಿತಂತೆ ಇದ್ದ ತಪ್ಪುಕಲ್ಪನೆಯನ್ನು ನಿವಾರಣೆ ಮಾಡಲು ಸಂದರ್ಭ ಒದಗಿ ಬಂದಿದೆ. ಇಂದು ಭಾರತ ಮುಕ್ತ ಮಾರುಕಟ್ಟೆ, ಉದಾರೀಕರಣದಂತಹ ನೀತಿಯನ್ನು ಉತ್ತೇಜಿಸುವುದಕ್ಕೆ ಆದ್ಯತೆ ನೀಡುತ್ತಿದೆ. ಪ್ರವಾಸೋದ್ಯಮಕ್ಕೆ ಮುಕ್ತ ವಾತಾವರಣವನ್ನು ಕಲ್ಪಿಸುತ್ತಿದೆ. ವಿದೇಶಿಯರನ್ನು ಮುಕ್ತ ಮನಸ್ಸಿನಿಂದ ಪ್ರಧಾನಿ ದೇಶಕ್ಕೆ ಆಹ್ವಾನಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವ ರೀತಿಯಲ್ಲೂ ವೈಜ್ಞಾನಿಕವಲ್ಲದ, ಸಾಮಾಜಿಕವೂ ಅಲ್ಲದ ಮಾಂಸಾಹಾರ ನಿಷೇಧ ಅಥವಾ ಮಾಂಸಾಹಾರ ಹಿಂಸೆ ಎಂಬ ಓಬಿರಾಯನ ಕಾಲದ ಕಾನೂನಿಗೆ ಅಂಟಿಕೊಳ್ಳುವುದು ತೀರಾ ಅಪ್ರಸ್ತುತವಾಗಿದೆ. ಈ ನಿಟ್ಟಿನಲ್ಲಿ ಕೆಲವು ದಿನಗಳ ಹಿಂದೆ, ದ.ಕ. ಜಿಲ್ಲಾಧಿಕಾರಿಯವರು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಒಂದು ಮಹತ್ವದ ಪತ್ರವನ್ನು ಬರೆದಿದ್ದಾರೆ. ಅದರಲ್ಲಿ, ಮಾಂಸ ಮಾರಾಟ ನಿಷೇಧ ದಿನಗಳೆಂದು ಘೋಷಿಸುವ ನಿಯಮವನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದ್ದಾರೆ. ಆದೇಶದಲ್ಲಿ ನಮೂದಿಸಲಾಗಿರುವ ಕೆಲವೊಂದು ಹಬ್ಬಗಳಿಗೆ ಜಿಲ್ಲೆಯಲ್ಲಿ ಸ್ಥಳೀಯವಾಗಿ ಯಾವುದೇ ಮಹತ್ವ ಇಲ್ಲ ಎನ್ನುವುದರ ಕಡೆಗೆ ಅವರು ಗಮನ ಸೆಳೆಯುತ್ತಾರೆ. ಅದೇ ಸಂದರ್ಭದಲ್ಲಿ ಅಂಬೇಡ್ಕರ್ ಮತ್ತು ಬುದ್ಧ ಜಯಂತಿಯ ದಿನ ಮಾಂಸಾಹಾರ ನಿಷೇಧದ ಬಗ್ಗೆಯೂ ಅವರು ಪತ್ರದಲ್ಲಿ ಪ್ರಶ್ನೆ ಎತ್ತಿದ್ದಾರೆ. ಮುಖ್ಯವಾಗಿ ಕೆಲವು ಜಿಲ್ಲೆಗಳಲ್ಲಿ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬೌದ್ಧ ಮತದವರು ನೆಲೆಸಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಬೌದ್ಧ ಮತಕ್ಕೆ ಮತಾಂತರವಾಗುತ್ತಿದ್ದಾರೆ. ಇವರು ಮಾಂಸಾಹಾರಿಗಳಾಗಿದ್ದು ನಿಷೇಧವನ್ನು ಒಪ್ಪುವುದಿಲ್ಲ. ಬುದ್ಧ ಜಯಂತಿಯಂದು ಮಾಂಸಾಹಾರ ನಿಷೇಧವನ್ನು ಸ್ವತಃ ಅವರ ಅನುಯಾಯಿಗಳೇ ಒಪ್ಪುವುದಿಲ್ಲವೆನ್ನುವಾಗ, ಈ ನಿಷೇಧದ ಔಚಿತ್ಯವೇನು ಎಂದು ಅವರು ಕೇಳಿದ್ದಾರೆ. ಈ ಪ್ರಶ್ನೆ ನಿಜಕ್ಕೂ ಚರ್ಚೆಗೆ ಅರ್ಹವಾದುದು. ವಿಪರ್ಯಾಸವೆಂದರೆ, ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲೂ ಮಾಂಸಾಹಾರವನ್ನು ನಿಷೇಧ ಮಾಡುವ ಸಂಚು ನಡೆದಿದೆ. ಅಂಬೇಡ್ಕರ್ ಅಪ್ಪಟ ಮಾಂಸಾಹಾರಿಯಾಗಿದ್ದರು. ಮತ್ತು ಅದು ಅವರ ಸಂಸ್ಕೃತಿಯಾಗಿತ್ತು. ಅವರ ಜಯಂತಿಯ ದಿನ, ಅದನ್ನು ನಿಷೇಧ ಮಾಡುವುದು ಪರೋಕ್ಷವಾಗಿ ಅವರ ಜೀವನ ಕ್ರಮವನ್ನೇ ಅವಮಾನಿಸಿದಂತೆ. ಇಷ್ಟಕ್ಕೂ, ಬಡತನ ಅಪೌಷ್ಟಿಕತೆಯಿಂದ ಅತಿ ಹೆಚ್ಚು ನರಳುತ್ತಿರುವುದು ಈ ದೇಶದ ದಲಿತರು. ಅಂಬೇಡ್ಕರ್ ದಿನವೇ ಮಾಂಸಾಹಾರ ನಿಷೇಧ ಮಾಡುವುದೆಂದರೆ, ಅಪೌಷ್ಟಿಕತೆ, ಬಡತನಕ್ಕೆ ಪ್ರೋತ್ಸಾಹ ನೀಡಿದಂತೆ. ಆಹಾರ ವೈಯಕ್ತಿಕವಾದುದು. ಮನೆಯೊಳಗಿನ, ಅಡುಗೆ ಮನೆಯೊಳಗಿನ ವಿಷಯ. ಅದನ್ನು ಸಾರ್ವಜನಿಕಗೊಳಿಸುವುದು ಪರೋಕ್ಷವಾಗಿ ನಾವು ಉಣ್ಣುವ ಆಹಾರಕ್ಕೆ ಅವಮಾನ ಮಾಡಿದಂತೆ. ನಾವು ಸೇವಿಸುವ ಆಹಾರ ಇನ್ನೊಬ್ಬನ ಬದುಕಿಗೆ ತೊಂದರೆಯಾಗಬಾರದು. ಒಂದು ಸಮುದಾಯದ ಹಬ್ಬ, ಒಬ್ಬನ ಜಯಂತಿ ಇನ್ನೊಬ್ಬ ಬದುಕಿನ ದೈನಂದಿನ ಆಹಾರದ ಮೇಲೆ ಹಸ್ತಕ್ಷೇಪ ನಡೆಸುವುದು ಯಾವ ರೀತಿಯಲ್ಲೂ ನಾಗರಿಕವಲ್ಲ. ಹಾಗೆಯೇ ತಮ್ಮ ಆಹಾರವನ್ನು ಇನ್ನೊಬ್ಬನ ಮೇಲೆ ಹೇರುವುದು ಕೂಡ ಸರಿಯಲ್ಲ. ಈ ಹಿನ್ನೆಲೆಯಲ್ಲಿ ಹಿಂಸೆ-ಅಹಿಂಸೆಯ ಹೆಸರಿನಲ್ಲಿ ವಿವಿಧ ಜಯಂತಿಯ ಸಂದರ್ಭದಲ್ಲಿ ಮಾಂಸಕ್ಕೆ ನಿಷೇಧ ಹೇರುವುದು ಬದುಕುವ ಹಕ್ಕಿನ ಮೇಲೆ ನಡೆಸುವ ದಾಳಿಯಾಗಿದೆ. ಇದರ ಜೊತೆ ಜೊತೆಗೆ ಮದ್ಯಪಾನ ನಿಷೇಧವನ್ನೂ ಈ ಒಂದು ದಿನ ಘೋಷಿಸಲಾಗುತ್ತದೆ. ಮದ್ಯಪಾನ ಆಹಾರವಲ್ಲ. ಅದು ಮನುಷ್ಯನ ವಿವೇಕವನ್ನು ನಾಶ ಮಾಡುವಂತಹದು. ಮತ್ತು ಸಾರ್ವಜನಿಕವಾಗಿ ಅದು ಬೀರುವ ದುಷ್ಪರಿಣಾಮ ಬಹುದೊಡ್ಡದು. ಮದ್ಯಪಾನ ಕೆಟ್ಟದು ಎನ್ನುವುದನ್ನು ಇಡೀ ಜಗತ್ತು ಬಹುಸಂಖ್ಯೆಯಲ್ಲಿ ಒಪ್ಪಿಕೊಂಡಿದೆ. ಕೆಟ್ಟದ್ದನ್ನು ಬರೇ ಮಹಾತ್ಮರ ಜಯಂತಿಯ ದಿನವಷ್ಟೇ ಬದಿಗಿಟ್ಟು, ಉಳಿದ ದಿನ ಅದಕ್ಕೆ ಪರವಾನಿಗೆ ನೀಡುವುದು ದ್ವಂದ್ವನೀತಿಯಾಗುತ್ತದೆ. ಮದ್ಯಪಾನ ಕೆಟ್ಟದ್ದು ಎಂದಾದರೆ ಎಲ್ಲ ದಿನಗಳಲ್ಲೂ ಅದು ನಿಷೇಧವಾಗಬೇಕು. ಇದೇ ಸಂದರ್ಭದಲ್ಲಿ ಕೆಲವು ಜಯಂತಿಯಂದು ಅನಗತ್ಯ ರಜೆಗಳನ್ನು ಘೋಷಿಸಿ ಸರಕಾರ ಕೆಲವು ಜಾತಿ, ಸಮುದಾಯಗಳನ್ನು ಓಲೈಸುವ ಪ್ರಯತ್ನ ಮಾಡುತ್ತಿದೆ. ಕೆಲವು ನಿರ್ದಿಷ್ಟ ಹಬ್ಬ ಮತ್ತು ರಾಷ್ಟ್ರೀಯ ದಿನಗಳನ್ನು ಹೊರತು ಪಡಿಸಿ, ಯಾರದೇ ಜಯಂತಿಗಳಿಗೆ ಅನಗತ್ಯ ರಜೆಗಳನ್ನು ನೀಡುವುದರಿಂದಲೂ ಸರಕಾರ ಹಿಂದೆ ಸರಿಯಬೇಕು. ಆ ಮೂಲಕವೇ ಆ ಮಹನೀಯರಿಗೆ ಸರಕಾರ ಗೌರವ ಸಲ್ಲಿಸಿದಂತಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News