×
Ad

ಮಲೆನಾಡ ಗಾಂಧಿ, ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡ ಇನ್ನಿಲ್ಲ

Update: 2016-01-06 23:43 IST

ಚಿಕ್ಕಮಗಳೂರು, ಜ.6: ಶಿಕ್ಷಣರಂಗದಲ್ಲಿ ಕ್ರಾಂತಿಕಾರಕ ಸುಧಾರಣೆ ತರುವ ಮೂಲಕ ‘ಮಲೆನಾಡ ಗಾಂಧಿ’ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದ ಸರಳ, ಸಜ್ಜನ, ಮಾಜಿ ಶಿಕ್ಷಣ ಸಚಿವ ಎಚ್.ಜಿ. ಗೋವಿಂದೇಗೌಡ ಬುಧವಾರ ಮಧ್ಯಾಹ್ನ 2:55ಕ್ಕೆ ಕೊಪ್ಪ ಪಟ್ಟಣದ ಹೊರ ವಲಯದ ಮಣಿಪುರದಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.


ಕಳೆದ ಎರಡು ವರ್ಷಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಜ.4ರಂದು ಬೆಳಗ್ಗೆ ತೀವ್ರ ಅಸ್ವಸ್ಥರಾಗಿದ್ದ ಅವರಿಗೆ ಕೊಪ್ಪ ಸರಕಾರಿ ಆಸ್ಪತ್ರೆಯ ವೈದ್ಯ ಡಾ. ಜಿ.ನೀಲಕಂಠಪ್ಪ ಪರೀಕ್ಷೆ ನಡೆಸಿ, ಔಷಧಿ ನೀಡಿದ ಬಳಿಕ ಕೊಂಚ ಚೇತರಿಕೆ ಕಂಡು ಬಂದಿತ್ತು. ಅನಂತರ ಅದೇ ದಿನ ಸಂಜೆಯ ವೇಳೆಗೆ ಗೌಡರು ತೀವ್ರ ಅಸ್ವಸ್ಥರಾಗಿದ್ದರು.


ಕೃತಕ ಉಸಿರಾಟದೊಂದಿಗೆ ಈತನಕ ಅವರು ಬದುಕಿ ಉಳಿದಿದ್ದರಾದರೂ ದೇಹದಲ್ಲಿ ಅಂತಹ ಯಾವುದೇ ಚಲನೆಯೂ ಕಾಣಿಸಿಸುತ್ತಿರಲಿಲ್ಲ. 2 ವರ್ಷಗಳ ಹಿಂದೆ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದ ಗೋವಿಂದೇಗೌಡರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಅನಂತರ ಅವರಲ್ಲಿ ಸಂಪೂರ್ಣ ಚೇತರಿಕೆ ಕಾಣಿಸಿಕೊಂಡಿರಲಿಲ್ಲ. ಅವರು ಆಹಾರ ಸೇವನೆಯಲ್ಲಿ ವ್ಯತ್ಯಯದ ಜೊತೆಗೆ ರಕ್ತದೊತ್ತಡದಿಂದ ಬಳಲುತ್ತಿದ್ದರು. ಕಳೆದ ಹದಿನೈದು ದಿನಗಳಿಂದಲೂ ಗೋವಿಂದೇಗೌಡರು ಅನ್ನಾಹಾರ ಸೇವನೆ ಇಲ್ಲದೆ ಕೇವಲ ಗ್ಲೂಕೋಸ್ ಹಾಗೂ ಕೃತಕ ಉಸಿರಾಟದ ಮೂಲಕ ಬದುಕಿ ಉಳಿದಿದ್ದರು. ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿ ಕಾಂತಾ, ಪುತ್ರ ಎಚ್.ಜಿ.ವೆಂಕಟೇಶ್, ಐದು ಮಂದಿ ಪುತ್ರಿಯರ ಸಹಿತ ಅಪಾರ ಬಂಧು-ಬಳಗ, ಅಭಿಮಾನಿಗಳನ್ನು ಅವರು ಅಗಲಿದ್ದಾರೆ.


1926ರ ಮೇ 25ರಂದು ಎನ್.ಆರ್.ಪುರ ತಾಲೂಕಿನ ಕಾನೂರು ಗ್ರಾಮದ ಹಿಣಚಿ ಎಂಬಲ್ಲಿ ಗಿಡ್ಡೇಗೌಡ ಮತ್ತು ಬೋಬಮ್ಮ ದಂಪತಿಯ ಪುತ್ರನಾಗಿ ಜನಿಸಿದ ಗೋವಿಂದೇಗೌಡರು, ಹುಟ್ಟೂರು ಕಾನೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದರು. ಬಳಿಕ ಚಿಕ್ಕಮಗಳೂರಿನಲ್ಲಿ ಪ್ರೌಡ ಶಿಕ್ಷಣದಲ್ಲಿ ಇಂಟರ್ ಮೀಡಿಯೇಟ್ ಪಡೆದರು. ಶಿವಮೊಗ್ಗದಲ್ಲಿ ಉನ್ನತ ಶಿಕ್ಷಣ ಮುಗಿಸಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಅವರು, ಓದನ್ನು ಅರ್ಧಕ್ಕೆ ಮೊಟಕುಗೊಳಿಸಿದರು. 1948ರಲ್ಲಿ ಕೊಪ್ಪದಲ್ಲಿ ಕಿರಾಣಿ ಅಂಗಡಿಯನ್ನು ತೆರೆದಿದ್ದರಾದರೂ ಗೋವಿಂದೇಗೌಡರು ರಾಜಕೀಯದ ಜೊತೆಗೆ ವ್ಯವಸಾಯದ ಕಡೆಗೆ ಹೆಚ್ಚಿನ ಮುತುವರ್ಜಿ ವಹಿಸಿದ್ದರು.


ಕೊಪ್ಪ ಪಟ್ಟಣ ಪಂಚಾಯತ್‌ಗೆ 24ನೆ ವಯಸ್ಸಿನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಗೋವಿಂದೇಗೌಡರು, ಅಲ್ಲಿಂದಲೇ ತನ್ನ ಕ್ರಾಂತೀಕಾರಿ ಬದಲಾವಣೆಗಳಿಗೆ ನಾಂದಿ ಹಾಡಿದ್ದರು. ಒಬ್ಬ ಜನಪ್ರತಿನಿಧಿ ಮನಸ್ಸು ಮಾಡಿದರೆ ಏನು ಮಾಡಬಹುದು ಎಂಬುದನ್ನು ಗೋವಿಂದೇಗೌಡರು ತೋರಿಸಿಕೊಟ್ಟರು. ಅವರು ಜನರಿಗೆ ಶುದ್ಧ ಕುಡಿಯುವ ನೀರು ಹಾಗೂ ವಿದ್ಯುತ್ ಸೇರಿದಂತೆ ಅಭಿವೃದ್ಧಿ ಕೆಲಸಗಳಿಗೆ ಕೈ ಹಚ್ಚಿದ್ದರು. ಆದಾಯ ಸೋರಿಕೆ ತಡೆಗಟ್ಟಲು ಪ್ರಯತ್ನಿಸಿದ್ದರು.


ಅಧಿಕಾರದ ದರ್ಪ ಪ್ರದರ್ಶಿಸದೆ ಸರಳ, ಸಜ್ಜನರಾಗಿ ತನ್ನ ನಡೆ, ನುಡಿ ಸತ್ಯ ಶುದ್ಧ ಕಾಯಕಗಳಿಂದ ನಾಡಿನ ಜನತೆಯ ಗೌರವಕ್ಕೆ ಪಾತ್ರರಾಗುವ ಮೂಲಕ ಜನತೆಯ ಕಣ್ಮಣಿಯಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಅಪ್ಪಟ ಗಾಂಧಿವಾದಿಯಾಗಿ, ಆದರ್ಶ ಜೀವನ ವೌಲ್ಯಗಳನ್ನು ಅಳವಡಿಸಿಕೊಂಡಿದ್ದರು.


ಸಮೂಹ ಮಾಧ್ಯಮಗಳು, ಶಿಕ್ಷಕರು, ಸಾರ್ವಜನಿಕರು, ಮಠಾಧಿಪತಿಗಳು, ರಾಜಕಾರಣಿಗಳನ್ನು ತನ್ನತ್ತ ಸೆಳೆದುಕೊಂಡಿದ್ದ ಗೋವಿಂದೇಗೌಡರು, ಪ್ರಾಮಾಣಿಕತೆ, ಸೇವೆ, ನಿಷ್ಠೆ, ಶಿಸ್ತು, ಸಂಯಮಗಳಿಗೆ ಹೆಸರಾಗಿ ಬಾಯಿಮಾತಾಗಿದ್ದರು. ಈ ಹಿಂದೆ ಶೃಂಗೇರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಕಡಿದಾಳು ಮಂಜಪ್ಪನವರ ಶ್ರೇಷ್ಠ ತತ್ತ್ವ, ನಿಷ್ಠೆ, ರಾಜಕಾರಣಕ್ಕೆ ಮನಸೋತು ಅವರಿಂದ ಪ್ರಭಾವಿತರಾಗಿ ರಾಜಕೀಯ ಕ್ಷೇತ್ರಕ್ಕೆ ಧುಮುಕಿದ್ದರು.


ಜಾತ್ಯತೀತ ಮನೊಭಾವನೆಯ ಗೌಡರು, ಸರ್ವ ಜನರು, ಸರ್ವ ಧರ್ಮದವರು, ಸಾಹಿತಿ, ಕಲಾವಿದರ ಪ್ರೀತಿ, ಗೌರವಗಳಿಗೆ ಪಾತ್ರರಾಗಿದ್ದರು. ವಿನೋಬಾ ಭಾವೆಯವರ ಭೂದಾನ ಚಳವಳಿ ಹಾಗೂ ಜಯಪ್ರಕಾಶ್ ನಾರಾಯಣರ ಸರ್ವೋದಯ ಚಳವಳಿಯಲ್ಲಿ ಅಚಲ ನಂಬಿಕೆ ನಿಷ್ಠೆ ಇರಿಸಿಕೊಂಡಿದ್ದರಲ್ಲದೆ ಸಕ್ರೀಯವಾಗಿ ಚಳುವಳಿಯಲ್ಲಿ ಭಾಗವಹಿಸಿದ್ದರು.


ರಾಷ್ಟ್ರಕವಿ ಕುವೆಂಪು ಅವರ ವಿಶ್ವ ಮಾನವ ಸಂದೇಶವನ್ನು ಬದುಕಿನ ಬುತ್ತಿಯಾಗಿಸಿಕೊಂಡಿದ್ದ ಅವರು, ಜಾತಿ ರಾಜಖಿಯ ಮತ್ತು ಭ್ರಷ್ಟಾಚಾರದಿಂದ ದೂರವಿದ್ದ ಶುದ್ಧ ರಾಜಕಾರಣಿಯಾಗಿದ್ದರು. ಗೋವಿಂದೇಗೌಡರು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿಯೂ ಅಧಿಕಾರ ವಹಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News