ಮೈಸೂರಿನಲ್ಲಿ ‘ಕಾವೇರಿ ನದಿ ಗ್ಯಾಲರಿ’
ಬೆಂಗಳೂರು, ಜ. 6: ಕಾವೇರಿ ನದಿಯ ಮಹತ್ವ, ಇತಿಹಾಸ, ಪಾವಿತ್ರತೆ, ನದಿಯಿಂದ ಆಗಿರುವ ಪ್ರಯೋಜನ, ಭವಿಷ್ಯದಲ್ಲಿ ನದಿಗೆ ಎದುರಾಗಬಹುದಾದ ಅಪಾಯ ಸೇರಿದಂತೆ ಕಾವೇರಿ ನದಿಯ ಸಮಗ್ರ ಪರಿಚಯ ಮಾಡಿಕೊಡಲು ಮೈಸೂರಿನಲ್ಲಿ ‘ಕಾವೇರಿ ನದಿ ಗ್ಯಾಲರಿ’ ಸ್ಥಾಪಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕಾವೇರಿ ನದಿ ಗ್ಯಾಲರಿ ಸ್ಥಾಪಿಸುವ ಸಂಬಂಧ ಒಡಂಬಡಿಕೆ ಬಳಿಕ ಮಾತನಾಡಿದ ಅವರು, ಕಾವೇರಿ ನದಿ ಗ್ಯಾಲರಿಯಲ್ಲಿ ಕಲಾ ತಾಂತ್ರಿಕತೆಯನ್ನು ಬಳಸಿಕೊಂಡು ಪ್ರವಾಸಿಗರಿಗೆ, ವಿದ್ಯಾರ್ಥಿಗಳಿಗೆ ಕಾವೇರಿ ನದಿ ಪಾತ್ರದ ಸಮಗ್ರ ನೈಜ ಚಿತ್ರಣ ಕಟ್ಟಿಕೊಡಲಾಗುವುದು ಎಂದರು.
ನದಿಯ ಉಗಮಸ್ಥಾನದಿಂದ ಹಿಡಿದು ಅದರ ಸಂಪೂರ್ಣ ಪಯಣ, ನದಿಯ ಬಗೆಗಿರುವ ಕಾಲ್ಪನಿಕ ಕಥೆಗಳು, ನದಿಯಿಂದ ಆಗಿರುವ ಲಾಭ, ನದಿ ಪಾತ್ರದ ಜೀವ ವೈವಿಧ್ಯತೆ, ಸಾಮಾಜಿಕ-ಆರ್ಥಿಕ ಪ್ರಾಮುಖ್ಯತೆ, ಪ್ರವಾಸೋದ್ಯಮ, ಸಂಸ್ಕೃತಿ, ನದಿಗೆ ಎದುರಾಗಬಹುದಾದ ಅಪಾಯ, ನದಿಯ ಸಂರಕ್ಷಣೆ, ನದಿಯ ಪುನರುಜ್ಜೀವನ, ಸಂಶೋಧನೆಗಳ ಬಗ್ಗೆ ಅನಿಮೇಶನ್, ಗ್ರಾಫಿಕ್ ತಂತ್ರಜ್ಞಾನ ಪ್ರದರ್ಶನ, ಸಂವಹನ, ಮ್ಯಾಪ್ ಬ್ರೌಸರ್‌ಗಳ ಮೂಲಕ ಸಮಗ್ರ ಪರಿಚಯ ನೀಡಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ 2015-16ನೆ ಆಯವ್ಯಯದಲ್ಲಿ ಈ ಕುರಿತು ಘೋಷಣೆ ಮಾಡಿದ್ದು, ಕಾವೇರಿ ನದಿ ಗ್ಯಾಲರಿಗಾಗಿ 3.5ಕೋಟಿ ರೂ. ಮೀಸಲಿರಿಸಿದ್ದಾರೆಂದ ಅವರು, ಈ ಸಂಬಂಧ ಮೈಸೂರಿನ ವಸ್ತು ಸಂಗ್ರಹಾಲಯ ಆವರಣದಲ್ಲಿ ಈಗಾಗಲೇ ಶಂಕುಸ್ಥಾಪನೆಯನ್ನೂ ನೆರವೇರಿಸಲಾಗಿದೆ ಎಂದರು.
ರಾಷ್ಟ್ರೀಯ ವಿಜ್ಞಾನ ಅಕಾಡಮಿ(ಎನ್‌ಎಎಸ್‌ಐ)ಸಂಸ್ಥೆಯು ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯದ ಸಹಯೋಗದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಇನ್ನು ಆರು ತಿಂಗಳುಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಿದೆ ಎಂದು ದೇಶಪಾಂಡೆ ತಿಳಿಸಿದರು.
ಇದೇ ಸಂಸ್ಥೆಯು ಮುಂದಿನ ಮೂರು ವರ್ಷಗಳ ಅವಧಿಗೆ ಗ್ಯಾಲರಿ ನಿರ್ವಹಣೆ ಮಾಡಲಿದ್ದು, ಅನಂತರ ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಿ ಕಾವೇರಿ ನದಿ ಗ್ಯಾಲರಿಯನ್ನು ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲಿದೆ ಎಂದು ದೇಶಪಾಂಡೆ ವಿವರಿಸಿದರು.
ಎನ್‌ಎಎಸ್‌ಐ ಮತ್ತು ಎನ್‌ಸಿಎಸ್‌ಎಂ ಸಂಸ್ಥೆಗಳು ಈಗಾಗಲೇ ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿ ಗ್ಯಾಲರಿ ಮತ್ತು ಅಲಹಾಬಾದ್‌ನಲ್ಲಿ ಗಂಗಾ ನದಿ ಗ್ಯಾಲರಿ ಯೋಜನೆಯನ್ನು ಪೂರ್ಣಗೊಳಿಸಿದೆ. ಕರ್ನಾಟಕ ರಾಜ್ಯದಲ್ಲಿ ಕಾವೇರಿ ನದಿ ಗ್ಯಾಲರಿ ಸಂಬಂಧ ಒಡಂಬಡಿಕೆಗೆ ಸಹಿ ಹಾಕಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜ್ಞಾನ ಆಯೋಗದ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್, ರಾಷ್ಟ್ರೀಯ ವಿಜ್ಞಾನ ಅಕಾಡಮಿ ಡಾ.ಮಂಜುಳಾ ಶರ್ಮಾ, ನಿರ್ದೇಶಕ ನಿರಜ್ ಕುಮಾರ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಸತ್ಯವತಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರದೀಪ್ ಸಿಂಗ್ ಕರೋಲಾ ಹಾಜರಿದ್ದರು.