ಜೋಶಿ, ಶೆಟ್ಟರ್ ಬಿಜೆಪಿಯ ನಕಲಿ ಕಾರ್ಯಕರ್ತರು: ಯತ್ನಾಳ್
ಬೆಂಗಳೂರು, ಜ. 6: ‘ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹಾಗೂ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಬಿಜೆಪಿಯ ನಕಲಿ ಕಾರ್ಯಕರ್ತರಾಗಿದ್ದು, ನಾನು ಆ ಪಕ್ಷದ ಅಸಲಿ ಕಾರ್ಯಕರ್ತ’ ಎಂದು ಮೇಲ್ಮನೆ ನೂತನ ಸದಸ್ಯ ಬಸವನಗೌಡ ಪಾಟೀಲ ಯತ್ನಾಳ್ ಲೇವಡಿ ಮಾಡಿದ್ದಾರೆ.
ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಪಕ್ಷಕ್ಕಾಗಿ ಶ್ರಮಿಸಿದ್ದೇನೆ. ವಿಜಯಪುರ, ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ ಎಂದರು.
ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ನಕಲಿ ಕಾರ್ಯಕರ್ತರಾದ ಪ್ರಹ್ಲಾದ್ ಜೋಶಿ ಮತ್ತು ಶೆಟ್ಟರ್ ಬಳಿ ನಾನು ಅರ್ಜಿ ಹಾಕುವುದಿಲ್ಲ ಎಂದ ಯತ್ನಾಳ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಸಿಎಂ ಅಭ್ಯರ್ಥಿ ಎಂದು ಘೋಷಿಸಿದರೆ ತಾನು ಬಿಜೆಪಿಗೆ ಮರಳುವ ಬಗ್ಗೆ ಚಿಂತನೆ ನಡೆಸುವೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆ ಚುನಾವಣೆಗೆ ಮೊದಲು ವಿಜಯಪುರ, ಬಾಗಲಕೋಟೆ ಕ್ಷೇತ್ರದಿಂದ ನನಗೆ ಟಿಕೆಟ್ ನೀಡಬೇಕೆಂದು ಪಕ್ಷದ ವರಿಷ್ಠರಿಗೆ ಮನವಿಮಾಡಿದ್ದೆ. ಆದರೆ, ಕೆಲವರ ದುರುದ್ದೇಶದಿಂದ ನನಗೆ ಟಿಕೆಟ್ ತಪ್ಪಿಸಿದರೂ, ಕ್ಷೇತ್ರದ ಮತದಾರರು ನನ್ನ ಕೈಬಿಡಲಿಲ್ಲ ಎಂದು ಸ್ಪಷ್ಟಪಡಿಸಿದರು.
ಗೋವು ನನ್ನ ನಂಬಿಕೆಯ ಸಂಕೇತ. ಹೀಗಾಗಿ ನಾನು ಗೋಮಾತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವುದು ನನ್ನ ಕನಸಾಗಿತ್ತು. ಆ ಹಿನ್ನೆಲೆಯಲ್ಲಿ ನಾನು ಗೋಮಾತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದೇನೆ ಎಂದು ಯತ್ನಾಳ್ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಸ್ಪಷ್ಟಣೆ ನೀಡಿದರು.