×
Ad

ರೈತರ ಹಿತದೃಷ್ಟಿಯಿಂದ ಹಾಲಿನ ದರ ಏರಿಕೆ: ಎ.ಮಂಜು

Update: 2016-01-06 23:10 IST

ಬೆಂಗಳೂರು, ಜ.6: ರಾಜ್ಯ ಹಾಲು ಮಹಾಮಂಡಳದ ಮನವಿ ಹಿನ್ನೆಲೆಯಲ್ಲಿ ರೈತರ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡಲಾಗಿದೆ ಎಂದು ಪಶುಸಂಗೋಪನೆ ಹಾಗೂ ರೇಶ್ಮೆ ಸಚಿವ ಎ.ಮಂಜು ತಿಳಿಸಿದ್ದಾರೆ.
 ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶ, ಮಹಾರಾಷ್ಟ್ರ, ದಿಲ್ಲಿ ಸೇರಿದಂತೆ ಇನ್ನಿತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲೇ ಹಾಲಿನ ದರ ಕಡಿಮೆಯಿದೆ. ಪ್ರಸ್ತುತ ನಾವು ಪ್ರತಿ ಲೀಟರ್‌ಗೆ ಹೆಚ್ಚಳ ಮಾಡಿರುವ ನಾಲ್ಕು ರೂ.ಗಳಲ್ಲಿ 2.50 ರೂ.ಗಳು ಹಾಲು ಉತ್ಪಾದಕರಿಗೆ ಲಭ್ಯವಾಗಲಿದೆ ಎಂದರು.
  ಹಾಲಿನ ದರ ಹೆಚ್ಚಳದಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಹೊರೆಯಾಗುತ್ತದೆ. ಹಾಲು ಉತ್ಪಾದಕರ ಹಿತಕ್ಕಾಗಿ ಬೆಲೆ ಏರಿಕೆ ಅಗತ್ಯವಾಗಿತ್ತು. ಪ್ರತಿ ಲೀಟರ್ ಹಾಲಿಗೆ 5 ರೂ.ಹೆಚ್ಚಳ ಮಾಡುವಂತೆ ಮನವಿ ಬಂದಿತ್ತು. ಆದರೆ, ಸರಕಾರವು ಹಾಲು ಉತ್ಪಾದಕರು ಹಾಗೂ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು 4 ರೂ.ಗಳನ್ನು ಮಾತ್ರ ಹೆಚ್ಚಳ ಮಾಡಿದೆ ಎಂದು ಅವರು ಹೇಳಿದರು.
ಹಾಲಿನ ದರ ಹೆಚ್ಚಳವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಮುಖಂಡರ ಪೈಕಿ ಎಷ್ಟು ಮಂದಿ ತಮ್ಮ ಮನೆಯಲ್ಲಿ ಹಸುವನ್ನು ಸಾಕಿ ಹಾಲನ್ನು ಉತ್ಪಾದನೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಪ್ರತಿಭಟನೆ ಮಾಡಿ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುತ್ತಿರುವರಿಗೆ ಹಾಲು ಕುಡಿಯುವುದು ಗೊತ್ತೇ ಹೊರತು, ಹಾಲು ಉತ್ಪಾದನೆ ಮಾಡಲು ರೈತರು ಪಡುವ ಕಷ್ಟದ ಅರವಿಲ್ಲ ಎಂದು ತಿರುಗೇಟು ನೀಡಿದರು.
ತಮ್ಮನ್ನು ಮಣ್ಣಿನ ಮಗ ಎನ್ನುವ ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಡಿ.ರೇವಣ್ಣಗೆ ಹಾಲು ಉತ್ಪಾದಕರಿಗೆ ಸರಕಾರ ನೆರವು ನೀಡುತ್ತಿರುವುದು ಇಷ್ಟವಿಲ್ಲವೇ. ಒಂದು ಲೀಟರ್ ತಂಪು ಪಾನೀಯವನ್ನು 40 ರೂ.ಗಳನ್ನು ನೀಡಿ ಖರೀದಿಸಲಾಗುತ್ತಿದೆ. ಹಾಲಿನ ದರವನ್ನು ಹೆಚ್ಚಳ ಮಾಡಿದರೆ ವಿರೋಧವೇಕೆ ಎಂದು ಅವರು ಪ್ರಶ್ನಿಸಿದರು.
2013ರ ನಂತರ ಇದೇ ಮೊದಲ ಬಾರಿಗೆ ಹಾಲಿನ ದರವನ್ನು ಹೆಚ್ಚಳ ಮಾಡಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಹಾಲಿನ ದರ ಹೆಚ್ಚಳಕ್ಕೂ ಯಾವುದೇ ಸಂಬಂಧವಿಲ್ಲ. ಇದು ಕಾಕತಾಳೀಯವಷ್ಟೇ. ಹಾಲಿನ ದರ ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಹಲವು ದಿನಗಳಿಂದ ಇದೆ. ನಾನು ಸಚಿವನಾದ ನಂತರ ಅದಕ್ಕೆ ಅವಕಾಶ ನೀಡಿದ್ದೇನೆ ಎಂದ ಮಂಜು ತಿಳಿಸಿದರು.
ಬೆಂಗಳೂರಿನಲ್ಲಿ ಇನ್ನು ಎರಡು ಲಕ್ಷ ಲೀಟರ್ ನಂದಿನಿ ಹಾಲು ಮಾರಾಟ ಮಾಡಲು ಅವಕಾಶವಿದೆ. ನಂದಿನಿ ಹಾಲು ಹಾಗೂ ಉಪ ಉತ್ಪನ್ನಗಳ ಮಾರಾಟ ಕೇಂದ್ರಗಳನ್ನು ಆರಂಭಿಸಲು ಮುಂದೆ ಬರುವವರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News