ಗೋಮಾತೆ ಹೆಸರಿನಲ್ಲಿ ಯತ್ನಾಳ್ ಪ್ರಮಾಣ
ಬೆಂಗಳೂರು, ಜ. 6: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಚುನಾಯಿತರಾದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ್ ಸೇರಿದಂತೆ ಒಟ್ಟು 24 ಮಂದಿ ಸದಸ್ಯರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು.
ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮೇಲ್ಮನೆ ಸಭಾಪತಿ ಡಿ.ಎಚ್.ಶಂಕರ ಮೂರ್ತಿ ನೂತನ ಸದಸ್ಯರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನವನ್ನು ಬೋಧಿಸಿದರು.
ಮೇಲ್ಮನೆಗೆ ಆಯ್ಕೆಯಾಗಿರುವ ಕೆ.ಸಿ.ಕೊಂಡಯ್ಯ, ಕೋಟಾ ಶ್ರೀನಿವಾಸ ಪೂಜಾರಿ, ಆರ್.ಪ್ರಸನ್ನಕುಮಾರ್, ಕೆ.ಪ್ರತಾಪಚಂದ್ರ ಶೆಟ್ಟಿ, ವಿಜಯ್‌ಸಿಂಗ್, ಬಿ.ಜಿ. ಪಾಟೀಲ್, ಬಸವನಗೌಡ ಪಾಟೀಲ್ ಯತ್ನಾಳ್, ಮಹಾಂತೇಶ್ ಕವಟಗಿಮಠ, ವಿವೇಕ್ ರಾವ್, ಶ್ರೀಕಾಂತ ಘೋಟ್ನೆಕರ್, ಶ್ರೀನಿವಾಸಮಾನೆ.
ಪ್ರದೀಪ್ ಶೆಟ್ಟರ್, ಬಸವರಾಜ ಪಾಟೀಲ ಇಟಗಿ, ಎಂ.ಕೆ.ಪ್ರಾಣೇಶ್, ಗೋಪಾಲ ಸ್ವಾಮಿ, ಕಾಂತರಾಜು, ಅಪ್ಪಾಜಿ ಗೌಡ, ಎಂ.ನಾರಾಯಣಸ್ವಾಮಿ, ಎಸ್.ರವಿ, ಸಿ.ಆರ್. ಮನೋಹರ್, ಶ್ರೀಕಾಂತ್ ಘೋಟ್ನೆಕರ್, ಸುನಿಲ್ ಸುಬ್ರಹ್ಮಣಿ, ಆರ್.ಧರ್ಮಸೇನಾ, ಸಂದೇಶ ನಾಗರಾಜ್ ಹಾಗೂ ಬಸಂತರಾವ್ ಪಾಟೀಲ್ ನೂತನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಮೇಲ್ಮನೆ ಸಭಾಪತಿ ಡಿ.ಎಚ್.ಶಂಕರ ಮೂರ್ತಿ ‘ರಾಜ್ಯಾಂಗ ಬದ್ಧವಾಗಿ ಪ್ರಮಾಣ ವಚನ ಸ್ವೀಕರಿಸುವಂತೆ ಸಲಹೆ ಮಾಡಿದರು. ಆದರೂ, ಹಾಸನ ಕ್ಷೇತ್ರದಿಂದ ಚುನಾಯಿತರಾಗಿರುವ ಗೋಪಾಲಸ್ವಾಮಿ ಕಾಲ ಭೈರವೇಶ್ವರನ ಹೆಸರಿನಲ್ಲಿ, ಪಕ್ಷೇತರ ಸದಸ್ಯ ಬಸವನಗೌಡ ಪಾಟೀಲ ಯತ್ನಾಳ್ ಗೋಮಾತೆ ಹೆಸರಿನಲ್ಲಿ, ಮಂಡ್ಯ ಕ್ಷೇತ್ರದಿಂದ ಆಯ್ಕೆಗೊಂಡಿರುವ ಅಪ್ಪಾಜಿಗೌಡ ಮಾಜಿ ಪ್ರಧಾನಿ ದೇವೇಗೌಡರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.