ಎಸ್‌ಇಝಡ್ ನಿರ್ಮಾಣಕ್ಕೆ ಜಮೀನು ವಶ ಕೆಐಎಡಿಬಿ ಕ್ರಮವನ್ನು ಮಾನ್ಯ ಮಾಡಿದ ಹೈಕೋರ್ಟ್
ಬೆಂಗಳೂರು, ಜ.6: ವಿಶೇಷ ಆರ್ಥಿಕ ವಲಯ(ಎಸ್‌ಇಝಡ್) ನಿರ್ಮಾಣ ಹಿನ್ನೆಲೆಯಲ್ಲಿ ಮಂಗಳೂರು ಪೆರಮಡಿ ಗ್ರಾಮದಲ್ಲಿ 16.20 ಎಕರೆ ಜಮೀನು ವಶಪಡಿಸಿಕೊಂಡಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಕ್ರಮವನ್ನು ಹೈಕೋರ್ಟ್ ಬುಧವಾರ ಮಾನ್ಯ ಮಾಡಿದೆ.
ಸ್ವಾಧೀನ ಪ್ರಕ್ರಿಯೆ ರದ್ದು ಕೋರಿ ಮಲ್ಲಪ್ಪಗೌಡ ಸೇರಿ ಆರು ಮಂದಿ ಪೆರಮಡಿ ಗ್ರಾಮಸ್ಥರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೋಹನ ಶಾಂತನಗೌಡ ಮತ್ತು ನ್ಯಾ.ಕೆ.ಎನ್.ಫಣೀಂದ್ರ ಅವರಿದ್ದ ವಿಭಾಗೀಯ ಪೀಠ, ಮೇಲ್ಮನವಿ ವಜಾಗೊಳಿಸಿ ಸ್ವಾಧೀನ ಪ್ರಕ್ರಿಯೆನ್ನು ಮಾನ್ಯ ಮಾಡಿತು.
ಆರ್ಥಿಕ ವಲಯ ನಿರ್ಮಾಣಕ್ಕೆ ಭೂ ಸ್ವಾಧೀನದಿಂದ ಭೂಮಿ ಕಳೆದುಕೊಂಡಿದ್ದ ಭೂ ಮಾಲಕರ ಪುನರ್‌ವಸತಿ ಕಲ್ಪಿಸಲು ಪೆರಮಡಿ ಗ್ರಾಮದಲ್ಲಿ 16.20 ಎಕರೆ ಜಮೀನು ವಶಪಡಿಕೊಳ್ಳಲಾಗಿತ್ತು. ಈಗಾಗಲೇ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಪುನರ್ವಸತಿಯೂ ಕಲ್ಪಿಸಲಾಗಿದೆ. ಅಲ್ಲದೆ, ಭೂಮಿ ನೀಡಿದ್ದ 23 ಮಂದಿ ಭೂ ಮಾಲಕರಲ್ಲಿ 20 ಮಂದಿ ಸ್ವಾಧೀನ ಪ್ರಕ್ರಿಯೆಗೆ ಸಮ್ಮತಿ ನೀಡಿ ಪರಿಹಾರವನ್ನೂ ಸ್ವೀಕರಿಸಿದ್ದಾರೆ. ಇದರಿಂದ ಈ ಪ್ರಕರಣದಲ್ಲಿನ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ ಎಂದು ಅಭಿಪ್ರಾಯಪಟ್ಟ ವಿಭಾಗೀಯ ಪೀಠ ಮೇಲ್ಮನವಿ ವಜಾಗೊಳಿಸಿದೆ.
ಅಲ್ಲದೆ, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಅವ್ಯವಹಾರ ನಡೆಸಿರುವ ಆರೋಪ ಸಂಬಂಧ ಲೋಕಾಯುಕ್ತ ಸಂಸ್ಥೆ ಸಲ್ಲಿಸಿದ್ದ ತನಿಖಾ ವರದಿಯನ್ನು ಸರಕಾರ ತಿರಸ್ಕರಿಸಿದೆ. ಹೀಗಾಗಿ ಇದೀಗ ಲೋಕಾಯುಕ್ತ ವರದಿ ಅಪ್ರಸ್ತುತ ಹಾಗೂ ಆ ಕುರಿತು ನ್ಯಾಯಾಲಯ ಯಾವ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.