ನಿಮ್ಹಾನ್ಸ್ ಕ್ಯಾಂಪಸ್ ನಿರ್ಮಾಣ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು, ಜ.6: ನಗರದ ಕೆ.ಆರ್.ಪುರಂನಲ್ಲಿ ಸರಕಾರ ಕಾನೂನು ಪ್ರಕಾರ ನಿಮ್ಹಾನ್ಸ್ ಕ್ಯಾಂಪಸ್ ನಿರ್ಮಿಸಿದ್ದಾರೆಂಬ ಹಿನ್ನೆಲೆಯಲ್ಲಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.
ತಿರುಮಲಪ್ಪ ಹಾಗೂ ಇತರೆ ಎಂಟು ಜನರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ಭೈರಾರೆಡ್ಡಿ ಅವರಿದ್ದ ಪೀಠ, ರಾಜ್ಯ ಸರಕಾರ 2013ರಲ್ಲಿ ಕೆ.ಆರ್.ಪುರಂ ಹೋಬಳಿ ವ್ಯಾಪ್ತಿಯಲ್ಲಿ ನಿಮ್ಹಾನ್ಸ್ ಕ್ಯಾಂಪಸ್ ನಿರ್ಮಾಣಕ್ಕಾಗಿ ಕಾನೂನು ಪ್ರಕಾರ 38.38 ಎಕರೆ ಭೂಮಿಯನ್ನು ವಶಪಡಿಸಿಕೊಂಡು ಆ ಸ್ಥಳದಲ್ಲಿ ನಿಮ್ಹಾನ್ಸ್ ಕ್ಯಾಂಪಸ್‌ನ್ನು ನಿರ್ಮಾಣ ಮಾಡಿತ್ತು. ಈಗ ಅರ್ಜಿದಾರರು 16 ಎಕರೆ ಜಾಗವನ್ನು ಕಾನೂನುಬಾಹಿರವಾಗಿ ವಶಪಡಿಸಿಕೊಂಡು 38.38 ಎಕರೆ ಜಾಗದಲ್ಲಿ ಕ್ಯಾಂಪಸ್‌ನ್ನು ನಿರ್ಮಿಸಿದ್ದಾರೆ. ಹೀಗಾಗಿ, ಕಾನೂನು ಬಾಹಿರವಾಗಿ ವಶಪಡಿಸಿಕೊಂಡಿರುವ ಭೂಮಿಯನ್ನು ವಾಪಸ್ ತಮಗೆ ನೀಡುವಂತೆ ಸರಕಾರಕ್ಕೆ ಆದೇಶಿಸುವಂತೆ ಅರ್ಜಿಯನ್ನು ಸಲ್ಲಿಸಿದ್ದರು.
ನ್ಯಾಯಮೂರ್ತಿಗಳು ವಕೀಲರ ವಾದ ಪ್ರತಿವಾದವನ್ನು ಆಲಿಸಿ ಅರ್ಜಿಯನ್ನು ವಜಾಗೊಳಿಸಿದರು. ಅಲ್ಲದೆ, ಭೂಮಿ ಬಗೆಗಿನ ಕಾಗದ ಪತ್ರಗಳ ಬಗ್ಗೆ ಸಂಶಯಗಳಿದ್ದರೆ ಅದರ ಬಗ್ಗೆ ಸಿವ್ಹಿಲ್ ಕೋರ್ಟ್ ಅಥವಾ ತಾಲೂಕು ಉಪ ಆಯುಕ್ತರ ಬಳಿ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಿರಿ ಎಂಬ ಆದೇಶ ನೀಡಿದರು.