ಲೋಕಾಯುಕ್ತಕ್ಕೆ ವಿವಾದ ರಹಿತರನ್ನು ನೇಮಿಸಿ: ಶೆಟ್ಟರ್
ಬೆಂಗಳೂರು, ಜ. 6: ಭ್ರಷ್ಟಾಚಾರ ನಿಗ್ರಹಿಸುವ ಲೋಕಾಯುಕ್ತ ಸಂಸ್ಥೆಗೆ ವಿವಾದ ರಹಿತ, ಸೂಕ್ತ ನ್ಯಾಯಮೂರ್ತಿಯೊಬ್ಬರನ್ನು ನೇಮಕ ಮಾಡಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಇಂದಿಲ್ಲಿ ಆಗ್ರಹಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಉಪ ಲೋಕಾಯುಕ್ತ ನ್ಯಾ.ಆನಂದ್ ಅವರನ್ನು ಒಮ್ಮತದಿಂದ ನೇಮಕ ಮಾಡಿದ್ದು, ಅವರ ನೇಮಕದ ಬಗ್ಗೆ ರಾಜ್ಯದಲ್ಲಿ ಯಾರೊಬ್ಬರೂ ಅಪಸ್ವರ ಎತ್ತಲಿಲ್ಲ. ಅದೇ ರೀತಿಯಲ್ಲಿ ನೂತನ ಲೋಕಾಯುಕ್ತ ಸ್ಥಾನಕ್ಕೂ ಸೂಕ್ತ ಹಾಗೂ ಅರ್ಹರನ್ನು ನಿಯೋಜಿಸಬೇಕೆಂದು ಒತ್ತಾಯಿಸಿದರು.
ನ್ಯಾಯಮೂರ್ತಿ ವಿಕ್ರಂಜಿತ್ ಸೇನ್ ಅವರನ್ನು ನೇಮಕ ಮಾಡುವಂತೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಲೋಕಾಯುಕ್ತ ಸಂಸ್ಥೆಗೆ ಕನ್ನಡಿಗರು ಮತ್ತು ಕನ್ನಡೇತರರು ಎಂಬುದಕ್ಕಿಂತ ವಿವಾದ ರಹಿತರು ಆ ಹುದ್ದೆಗೆ ನೇಮಕ ಆಗಬೇಕೆಂಬುದು ನಮ್ಮ ಅಪೇಕ್ಷೆ ಎಂದು ಹೇಳಿದರು.
ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಆರ್.ನಾಯಕ್ ವಿರುದ್ಧ ಆರೋಪ ಕೇಳಿಬಂದಿದೆ. ಆದುದರಿಂದ ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ಸ್ಥಾನಕ್ಕೆ ಅರ್ಹರನ್ನು ನೇಮಕ ಮಾಡುವ ವಿಶ್ವಾಸವಿದೆ ಎಂದು ಜಗದೀಶ್ ಶೆಟ್ಟರ್ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.