ಸರಕಾರಿ ಶಾಲೆಗಳ ರಕ್ಷಣೆಗಾಗಿ ಜ.20ರಂದು ಪತ್ರ ಚಳವಳಿ

Update: 2016-01-06 17:46 GMT

ಬೆಂಗಳೂರು, ಜ. 6: ಖಾಸಗಿ ಶಾಲೆಗಳ ಮೇಲೆ ನಿಯಂತ್ರಣ ಹೇರಬೇಕು ಹಾಗೂ ಸರಕಾರಿ ಶಾಲಾ ವ್ಯವಸ್ಥೆ ಬಲಪಡಿಸಬೇಕೆಂದು ಆಗ್ರಹಿಸಿ ಶಾಲಾ ಮ್ಕಕಳ ಪೋಷಕರಿಂದ ಜ.20 ರಂದು ಮುಖ್ಯಮಂತ್ರಿಗಳಿಗೆ ಪತ್ರ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾನ ಶಿಕ್ಷಣಕ್ಕಾಗಿ ಜನಾಂದೋಲನದ ರಾಜ್ಯ ಸಂಚಾಲಕ ಶ್ರೀಪಾದ ಭಟ್ ತಿಳಿಸಿದ್ದಾರೆ
ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ್ಮಾ) ಲಾಭಕ್ಕಾಗಿ ಶಾಲಾ ಮಕ್ಕಳ ಪೋಷಕರು, ಅಧಿಕಾರಿಗಳನ್ನು ಬಳಸಿಕೊಳ್ಳಲು ಹೊರಟಿದೆ. ಇದರಿಂದ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ವ್ಯಾಪಾರೀಕರಣವಾಗಲಿದೆ ಎಂದು ಹೇಳಿದರು.
  ಗೋಷ್ಠಿಯಲ್ಲಿ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಕುಸ್ಮಾ ಸಂಘಟನೆ ಸರಕಾರದ ಮೇಲೆ ಒತ್ತಡವನ್ನು ಹೇರುವ ಮೂಲಕ ಅವೈಜ್ಞಾನಿಕ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸಲು ಹೊರಟಿದೆ. ಈ ಪರಿಣಾಮ ಶಿಕ್ಷಣ ವ್ಯಾಪಾರೀಕರಣದ ದಂಧೆಯಲ್ಲಿ ಸಿಲುಕುವುದರಿಂದಾಗಿ ಬಡವರು ಶಿಕ್ಷಣದಿಂದ ವಂಚಿತರಾಗುವುದಲ್ಲದೆ ಸಮಾಜದಲ್ಲಿ ಅಸಮಾನತೆ ಮತ್ತು ಅನಕ್ಷರತೆ ಬೆಳೆಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಖಾಸಗಿ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ಹಾವಳಿಯಿಂದ ರಾಜ್ಯದಲ್ಲಿ ಈಗಾಗಲೇ 374 ಸರಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಹೀಗಾಗಿ ಖಾಸಗಿ ಮತ್ತು ಅನುದಾನಿತ ಶಾಲೆಗಳಿಗೆ ಕಡಿವಾಣ ಹಾಕಬೇಕಿದೆ. ಈ ನಿಟ್ಟಿನಲ್ಲಿ ಸರಕಾರ ಸಮಾನ ಶಾಲಾ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
   ಸರಕಾರಿ ಶಾಲೆಗಳಿಗೆ ಅವಶ್ಯವಿರುವ ಶಿಕ್ಷಕರನ್ನು ಕೂಡಲೇ ನೇಮಿಸಬೇಕು, ಶಾಲೆಗಳನ್ನು ಕನಿಷ್ಠ ಕೇಂದ್ರೀಯ ವಿದ್ಯಾಲಯಗಳ ಮಟ್ಟಕ್ಕೆ ಏರಿಸಬೇಕು, ಖಾಸಗಿ ಶಾಲೆಗಳ ಶುಲ್ಕದ ಪ್ರಮಾಣಕ್ಕೆ ನಿಯಂತ್ರಣ ಹೇರಬೇಕು ಎಂದು ಸರಕಾರವನ್ನು ಒತ್ತಾಯಿಸಿದರು. ಗೋಷ್ಠಿಯಲ್ಲಿ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನದ ಸಂಚಾಲಕ ಮುತ್ತುರಾಜು, ವಕೀಲೆ ಅಖಿಲಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News