×
Ad

ಮೋದಿಗೆ ‘ನೊಬೆಲ್ ಶಾಂತಿ ಪುರಸ್ಕಾರ’ದ ಹಂಬಲ !: ಪ್ರಮೋದ್ ಮುತಾಲಿಕ್

Update: 2016-01-07 18:58 IST

ಕಲಬುರಗಿ, ಜ. 7: ಪಾಕಿಸ್ತಾನಕ್ಕೆ ಅನಿರೀಕ್ಷಿತ ಭೇಟಿ ನೀಡುವ ಮೂಲಕ ಪ್ರಧಾನಿ ಮೋದಿ ‘ಶಾಂತಿದೂತ’ ಎನಿಸಿಕೊಳ್ಳಲು ಹೊರಟಿದ್ದಾರೆ. ಅವರಿಗೆ ‘ನೊಬೆಲ್ ಶಾಂತಿ’ ಪುರಸ್ಕಾರ ಪಡೆಯುವ ಹಂಬಲ ಇದ್ದಂತಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಲೇವಡಿ ಮಾಡಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ದಿಢೀರ್ ಭೇಟಿ ನೀಡಿದ್ದು ಯಾವುದೇ ಕಾರಣಕ್ಕೂ ಸರಿಯಲ್ಲ. ಭೇಟಿಯ ಹಿಂದಿನ ಕಾರಣವನ್ನು ಪ್ರಧಾನಿ ಕೂಡಲೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಭಯೋತ್ಪಾದನೆ ಮತ್ತು ಶಾಂತಿ ಮಾತುಕತೆ ಒಟ್ಟಿಗೆ ನಡೆಯಬಾರದು ಎಂದು ಹೇಳುತ್ತಿದ್ದ ಪ್ರಧಾನಿ ಮೋದಿ ಅವರು, ಪಾಕಿಸ್ತಾನಕ್ಕೆ ಯಾವ ಕಾರಣಕ್ಕಾಗಿ ದಿಢೀರ್ ಭೇಟಿ ನೀಡಿದ್ದಾರೆಂಬುದು ದೇಶದ ಜನತೆಗೆ ಗೊತ್ತಾಗಬೇಕು ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಬಾಂಧವ್ಯ ಕಡಿದುಕೊಳ್ಳಿ: ಪಾಕಿಸ್ತಾನದೊಂದಿಗೆ ‘ಪೆನ್’ ಮಾತುಕತೆ ಬೇಡ. ಬದಲಿಗೆ ‘ಗನ್’ ಹಿಡಿದೆ ಮಾತುಕತೆ ನಡೆಸಬೇಕು. ಆಗ ಮಾತ್ರವೇ ಪಾಕಿಸ್ತಾನಕ್ಕೆ ಬುದ್ಧಿ ಬರುತ್ತದೆ. ಅಲ್ಲಿಯವರೆಗೂ ಪಾಕಿಸ್ತಾನದೊಂದಿಗೆ ಭಾರತ ಎಲ್ಲ ರೀತಿಯ ಬಾಂಧವ್ಯಗಳನ್ನು ಕಡಿದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಪಂಜಾಬ್‌ನ ಪಠಾಣ್‌ಕೋಟ್‌ನ ಭಾರತೀಯ ವಾಯುನೆಲೆಯ ಮೇಲಿನ ಉಗ್ರರು ದಾಳಿ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಸ್ಪಷ್ಟಣೆ ನೀಡಬೇಕು ಎಂದು ಆಗ್ರಹಿಸಿ ಮುತಾಲಿಕ್, ಪಠಾಣ್ ಕೋಟ್ ಪ್ರಕರಣದಲ್ಲಿ ಭದ್ರತಾ ಲೋಪ ಒಪ್ಪಿಕೊಂಡಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಕೂಡಲೇ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಗ್ರಾಮೀಣ ಪ್ರದೇಶದಲ್ಲಿ ‘ಲವ್ ಜಿಹಾದ್’ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಅಮಾಯಕ ಯುವತಿಯರನ್ನು ಪ್ರೀತಿಸುವ ನೆಪದಲ್ಲಿ ಮತಾಂತರ ಮಾಡಲಾಗುತ್ತಿದೆ ಎಂದು ದೂರಿದ ಅವರು, ಈ ಬಗ್ಗೆ ಪೋಷಕರು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.

ರಾಮ ಮಂದಿರ ನಿರ್ಮಾಣ ನ್ಯಾಯಾಲಯದಿಂದ ಇತ್ಯರ್ಥ ಆಗಲು ಸಾಧ್ಯವಿಲ್ಲ. ಆದುದರಿಂದ ತ್ಯಾಗ-ಬಲಿದಾನದ ಮೂಲಕ ರಾಮಮಂದಿರ ನಿರ್ಮಾಣ ಸಾಧ್ಯ ಎಂದ ಮುತಾಲಿಕ್, ಕೇಂದ್ರ ಸರಕಾರ ದೇಶದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿ ಗೊಳಿಸಬೇಕು ಎಂದು ಒತ್ತಾಯಿಸಿದರು.

‘ಪಂಜಾಬ್‌ನ ಪಠಾಣ್ ಕೋಟ್ ಭಾರತೀಯ ವಾಯು ನೆಲೆಯ ಮೇಲಿನ ಉಗ್ರರ ದಾಳಿ ಪ್ರಕರಣದಲ್ಲಿ ಭದ್ರತಾ ಲೋಪ ಒಪ್ಪಿಕೊಂಡಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಕೂಡಲೇ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.’

-ಪ್ರಮೋದ್ ಮುತಾಲಿಕ್ ಶ್ರೀರಾಮಸೇನೆ ಮುಖ್ಯಸ್ಥ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News