×
Ad

‘ಹಾಲಿನ ದರ ಏರಿಕೆ, ಹೆಲ್ಮೆಟ್ ಕಡ್ಡಾಯ ಆದೇಶ ಹಿಂಪಡೆಯಲಿ’

Update: 2016-01-07 23:17 IST

ಬೆಂಗಳೂರು, ಜ.7: ಹಾಲಿನ ಬೆಲೆ ಏರಿಕೆ ಹಾಗೂ ದ್ವಿಚಕ್ರ ವಾಹನಗಳ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿರುವ ಆದೇಶವನ್ನು ರಾಜ್ಯ ಸರಕಾರ ಕೂಡಲೇ ಹಿಂಪಡೆಯಬೇಕೆಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದರು. ಗುರುವಾರ ರಾಜ್ಯ ಸರಕಾರದ ಆದೇಶದ ವಿರುದ್ಧ ನಗರದ ಪುರಭವನದ ಮುಂಭಾಗ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಾಲಿನ ದರವನ್ನು ಏರಿಕೆ ಮಾಡುವ ಮೂಲಕ ರಾಜ್ಯ ಸರಕಾರ ಬಡವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.
ಹಾಲಿನ ದರ ಏರಿಕೆಯಿಂದಾಗಿ ಬಡ ಮಕ್ಕಳು ಪೌಷ್ಟಿಕ ಆಹಾರದಿಂದ ವಂಚಿತರಾಗಿದ್ದಾರೆ. ಹೊಟೇಲ್‌ಗಳಲ್ಲಿ ಕಾಫಿ, ಟೀ ಬೆಲೆಯಲ್ಲಿ ದುಪ್ಪಟ್ಟಾಗಿದೆ. ಇದರಿಂದ ಬಡವರು ಹಾಗೂ ಶ್ರಮಜೀವಿಗಳು ಕಾಫಿ, ಟೀ ಕುಡಿಯುವುದನ್ನು ಬಿಡುವಂತಹ ಪರಿಸ್ಥಿತಿ ಉದ್ಭವವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬಸ್‌ದರ, ಹಾಲಿನ ದರ, ನೀರಿನದರವನ್ನು ಏರಿಕೆ ಮಾಡಿ ಇಲ್ಲ ಸಲ್ಲದ ಭಾಗ್ಯಗಳನ್ನು ಕೊಡಲು ಹೊರಟಿದೆ ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಪಘಾತ ತಡೆಗೆ ಹೆಲ್ಮೆಟ್ ಕಡ್ಡಾಯ ಮಾಡಿರುವುದು ಪರಿಹಾರವಲ್ಲ. ರಸ್ತೆಗಳ ಗುಣಮಟ್ಟ ಹದಗೆಟ್ಟ ಕಾರಣ ನಗರದಲ್ಲಿ ಅಪಘಾತಗಳು ಹೆಚ್ಚುತ್ತಿವೆ. ಮೊದಲು ನಗರದಲ್ಲಿ ಹದಗೆಟ್ಟ ರಸ್ತೆಗಳನ್ನು ಸರಿಪಡಿಸಿ ಜನರಿಗೆ ಸುರಕ್ಷತೆ ನೀಡಬೇಕು. ಗುಂಡಿಬಿದ್ದ ರಸ್ತೆಗಳಿಂದಾಗಿ ಪ್ರತಿದಿನ ವಾಹನ ಸವಾರರು ಅಪಘಾತಕ್ಕೆ ಈಡಾಗುತ್ತಿದ್ದಾರೆ. ಈ ಬಗ್ಗೆ ನಿಗಾವಹಿಸಿ, ಸಂಚಾರಿ ಪೊಲೀಸರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕೆಂದು ಅವರು ತಿಳಿಸಿದರು.
ಪ್ರತಿಭಟನೆಯಲ್ಲಿ ವಿಧಾನಪರಿಷತ್ ಸದಸ್ಯೆ ತಾರಾ, ಬಿಜೆಪಿ ನಗರಾಧ್ಯಕ್ಷ ಸುಬ್ಬಣ್ಣ, ಶಾಸಕ ರವಿಸುಬ್ರಹ್ಮಣ್ಯ, ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಬಿಜೆಪಿ ಯುವಮೊರ್ಚಾ ನಗರಾಧ್ಯಕ್ಷ ಸಪ್ತಗಿರಿ ಗೌಡ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News