ಆರು ಕಡೆ ‘ಫಾರ್ಮ್ ಪಾರ್ಕ್’ ಸ್ಥಾಪನೆ: ಸಚಿವ ಅನಂತಕುಮಾರ್
ಬೆಂಗಳೂರು, ಜ. 7: ಕರ್ನಾಟಕ, ಆಂಧ್ರ ಪ್ರದೇಶ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡ ಸೇರಿದಂತೆ ದೇಶದ ಆರು ಕಡೆಗಳಲ್ಲಿ ಔಷಧ ತಯಾರಿಕೆಗೆ ಅನುಕೂಲ ಆಗುವಂತೆ ‘ಫಾರ್ಮ್‌ಪಾರ್ಕ್’ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ.
ಗುರುವಾರ ಇಲ್ಲಿನ ತುಮಕೂರು ರಸ್ತೆಯಲ್ಲಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಔಷಧ ಮೇಳ’ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ಔಷಧ ತಯಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಔಷಧ ಹಾಗೂ ಆರೋಗ್ಯ ಪರಿಕರಗಳ ತಯಾರಿಕಾ ಕ್ಷೇತ್ರ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಈ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರಕಾರ ವಿಫುಲ ನೆರವು ನೀಡುತ್ತಿದೆ ಎಂದ ಅವರು, ಪ್ರಸ್ತುತ 30 ಬಿಲಿಯನ್ ಡಾಲರ್ ಇರುವ ಔಷಧ ಕ್ಷೇತ್ರದ ವಹಿವಾಟು ಮುಂದಿನ ದಿನಗಳಲ್ಲಿ 50 ಬಿಲಿಯನ್ ಡಾಲರ್‌ಗೆ ಹೆಚ್ಚಳ ಆಗುವ ಸಾಧ್ಯತೆಗಳಿವೆ ಎಂದು ಅವರು ವಿಶ್ಲೇಷಿಸಿದರು.
ಭಾರತ ಅಗ್ರಗಣ್ಯ: ಔಷಧ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ವಿಶ್ವದ ಗಮನ ಸೆಳೆದಿದ್ದು, ಜಗತ್ತಿನ ರಾಷ್ಟ್ರಗಳಲ್ಲಿ ಬಳಸುವ ಐದು ಪ್ರಮುಖ ಔಷಧಗಳ ಪೈಕಿ ಒಂದು ಭಾರತದಲ್ಲಿ ಉತ್ಪಾದನೆ ಆಗಿರುತ್ತದೆಂಬುದು ಹೆಮ್ಮೆಯ ಸಂಗತಿ. ಅಷ್ಟರಮಟ್ಟಿಗೆ ಔಷಧ ಕ್ಷೇತ್ರದಲ್ಲಿ ಭಾರತ ಪ್ರಗತಿ ಕಂಡಿದೆ ಎಂದು ಅನಂತ್‌ಕುಮಾರ್ ಹೇಳಿದರು.
ಔಷಧ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂದಿನ ಆಯವ್ಯಯದಲ್ಲಿ ಕರ್ನಾಟಕ, ಮಧ್ಯಪ್ರದೇಶ ಹಾಗೂ ಆಂಧ್ರಪ್ರದೇಶದಲ್ಲಿ ಔಷಧ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಅನುದಾನ ಮೀಸಲಿಡಲಾಗುವುದು ಎಂದು ಅನಂತಕುಮಾರ್ ಇದೇ ವೇಳೆ ಭರವಸೆ ನೀಡಿದರು.
ಫಾರ್ಮ್ ಪಾರ್ಕ್ ಸ್ಥಾಪನೆಗೆ ರಾಜ್ಯ ಸರಕಾರ ನೂರು ಎಕರೆ ಭೂಮಿ ಹಾಗೂ ತೆರಿಗೆ ವಿನಾಯಿತಿ ನೀಡಲು ಸಮ್ಮತಿಸಿದ್ದು, ಫೆಬ್ರವರಿಯಲ್ಲಿ ನಡೆಯಲಿರುವ ‘ಇನ್ವೆಸ್ಟ್ ಕರ್ನಾಟಕ’ ಸಮಾವೇಶದಲ್ಲಿ ಈ ಸಂಬಂಧ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಬೇರೆ ಇಲಾಖೆ ಅಧೀನದಲ್ಲಿದ್ದ ಔಷಧ ವಿಜ್ಞಾನ ಇಲಾಖೆ ಯನ್ನು ಪ್ರಧಾನಿ ಮೋದಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿದ್ದಾರೆ. ಔಷಧಿ ಉದ್ಯಮಕ್ಕೆ ತೆರಿಗೆ ವಿನಾಯಿತಿ ಸೇರಿದಂತೆ ಹಲವಾರು ಸೌಲಭ್ಯ ನೀಡಬೇಕೆಂಬ ಮನವಿ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಪ್ರಧಾನಿ ಬಳಿಗೆ ಔಷಧ ಉದ್ಯಮಿಗಳ ನಿಯೋಗವನ್ನು ಕೊಂಡೊಯ್ಯಲಾಗುವುದು ಎಂದು ಭರವಸೆ ನೀಡಿದರು.
ಸಮಾವೇಶದಲ್ಲಿ ಪಾಲ್ಗೊಂಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಮಾತನಾಡಿ, ದೇಶೀಯವಾಗಿ ಔಷಧ ಉತ್ಪಾದನೆ ಹೆಚ್ಚಬೇಕಿದೆ. ಇದರಿಂದ ಜನ ಸಾಮಾನ್ಯರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಸರಕಾರಿ ಆಸ್ಪತ್ರೆಗಳಿಗೆ ಔಷಧ ಪೂರೈಕೆಗೆ ಟೆಂಡರ್ ಆಹ್ವಾನಿಸಿದರೆ ಪ್ರಮುಖ ಕಂಪೆನಿಗಳೇ ಪಾಲ್ಗೊಳ್ಳುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್, ಕೇಂದ್ರ ಸಚಿವ ಹನ್ಸರಾಜ್, ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.