ಐಎಎಸ್ ಅಧಿಕಾರಿಗಳ ಭಡ್ತಿ ಪ್ರಕರಣ: ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು, ಜ.7: ಕಾನೂನು ಸೇವಾ ಪ್ರಾಧಿಕಾರ ಕಾಯ್ದೆ ತಿದ್ದುಪಡಿ ಅನ್ವಯ ಐಎಎಸ್ ಅಧಿಕಾರಿಗಳಿಗೆ ಬಡ್ತಿಯನ್ನು ನೀಡಿಲ್ಲವೆಂಬ ಹಿನ್ನೆಲೆಯಲ್ಲಿ ಸಲ್ಲಿಸ ಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಯೂನಿಯನ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೋಹನ್ ಎಂ. ಶಾಂತನಗೌಡರ ಹಾಗೂ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
2012ರಲ್ಲಿ ಕೇಂದ್ರ ಕಾನೂನು ಸೇವಾ ಪ್ರಾಧಿಕಾರ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಅಲ್ಲದೆ, 2000 ಹಾಗೂ 2001ರಲ್ಲಿಯೇ ಐಎಸ್‌ಐ ಅಧಿಕಾರಿಗಳಾದ ವಿ.ಶಂಕರ್, ಶ್ರೀರಾಮರೆಡ್ಡಿ, ಎಫ್.ಆರ್.ಜಾಮದಾರ್ ಅವರಿಗೆ ಭಡ್ತಿಯನ್ನು ನೀಡಬೇಕಾಗಿತ್ತು. ಆದರೆ, ನೀಡಿಲ್ಲ. ಹೀಗಾಗಿ, ಈ ಮೂವರು ಅಧಿಕಾರಿಗಳಿಗೆ ಭಡ್ತಿಯನ್ನು ನೀಡಲು ಕೇಂದ್ರ ಸರಕಾರಕ್ಕೆ ಸೂಚನೆ ನೀಡಬೇಕೆಂಬ ವಾದವನ್ನು ಮಂಡಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸರಕಾರ ಪರ ವಕೀಲರು ಕೇಂದ್ರ ಕಾನೂನು ಸೇವಾ ಪ್ರಾಧಿಕಾರ ಕಾಯ್ದೆಗೆ 2012ರಲ್ಲಿ ತಿದ್ದುಪಡಿಯನ್ನು ತಂದಿದ್ದರೂ ಕಾನೂನಿನಲ್ಲಿರುವ ಪೂರ್ವಾನುಮತಿ ಹಾಗೂ ಅನುಮತಿಗಳು ಬಡ್ತಿಗೆ ತಡೆಯೊಡ್ಡುತ್ತಿದ್ದರಿಂದ ಈ ಮೂವರು ಐಎಎಸ್ ಅಧಿಕಾರಿಗಳಿಗೆ ಭಡ್ತಿಯನ್ನು ನೀಡಿಲ್ಲವೆಂದಾಗ ನ್ಯಾಯಮೂರ್ತಿಗಳು ಅರ್ಜಿಯನ್ನು ವಜಾಗೊಳಿಸಿ ಸರಕಾರದ ಕ್ರಮವನ್ನು ಎತ್ತಿಹಿಡಿದರು.