×
Ad

ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮ: ಸಚಿವ ಖಾದರ್

Update: 2016-01-07 23:21 IST

ಬೆಂಗಳೂರು, ಜ. 7: ಡೆಂಗಿ, ಮಲೇರಿಯಾ ಸೇರಿದಂತೆ ಇನ್ನಿತರ ಸಾಂಕ್ರಾಮಿಕ ರೋಗಗಳು ಕುಡಿಯುವ ನೀರಿನ ಸಮಸ್ಯೆಯಿಂದ ಬರುತ್ತಿದ್ದು, ಈ ರೋಗಗಳ ತಡೆಗೆ ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
 ಗುರುವಾರ ನಗರದಲ್ಲಿ ಏರ್ಪಡಿಸಿದ್ದ ‘ಸುಸ್ಥಿರ ನೀರು ಮತ್ತು ಒಳಚರಂಡಿ ವ್ಯವಸ್ಥೆ’ಗೆ ಸಂಬಂಧಿಸಿದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಮೂಲ ಸೌಕರ್ಯ ಮತ್ತು ಅಸಮರ್ಪಕ ಒಳಚರಂಡಿ ವ್ಯವಸ್ಥೆಯಿಂದ ಎದುರಾಗುವ ಸಮಸ್ಯೆಗಳ ನಿವಾರಣೆಗೆ ಸರಕಾರ ಕ್ರಮ ಕೈಗೊಂಡಿದೆ ಎಂದರು.
ಆಧುನಿಕ ತಂತ್ರಜ್ಞಾನದ ಮೂಲಕ ಒಳಚರಂಡಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕು. ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದ ಅವರು, ಎಲ್ಲ ನಾಗರಿಕರ ಆರೋಗ್ಯ ರಕ್ಷಣೆಗೆ ಸರಕಾರ ಆದ್ಯತೆ ನೀಡಿದ್ದು, ಶುದ್ಧ ಕುಡಿಯುವ ನೀರಿನ್ನು ಒದಗಿಸಲು ಕ್ರಮ ವಹಿಸಲಾಗಿದೆ ಎಂದರು.
ಹಿರಿಯ ಅಧಿಕಾರಿ ಡಾ.ರವೀಂದ್ರ ಮಾತನಾಡಿ, ನಗರ ಪ್ರದೇಶದಲ್ಲಿ ಶೇ.70ರಷ್ಟು ಮತ್ತು ಗ್ರಾಮೀಣ ಪ್ರದೇಶದಲ್ಲಿ ಶೇ.30ರಷ್ಟು ಶೌಚಾಲಯ ಸೌಲಭ್ಯವಿದೆ. ಆದರೆ, ರಾಜ್ಯ ಸರಕಾರ ಶೇ.90ರಷ್ಟು ಶೌಚಾಲಯ ನಿರ್ಮಿಸಿದ್ದೇವೆ ಎಂದು ಕೇವಲ ಅಂಕಿ-ಅಂಶಗಳನ್ನು ತೋರಿಸುತ್ತಿದೆ ಎಂದು ದೂರಿದರು.
ಒಳಚರಂಡಿ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ ಎಂದು ಎಚ್ಚರಿಸಿದ ಅವರು, ನೀರಿನಿಂದಲೇ ಕ್ಯಾನ್ಸರ್ ಸೇರಿದಂತೆ ಹಲವು ತೀವ್ರ ಸ್ವರೂಪದ ಕಾಯಿಲೆಗಳು ಬರುತ್ತಿದ್ದು, ಈ ಬಗ್ಗೆ ಎಚ್ಚರ ವಹಿಸಬೇಕೆಂದು ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News