×
Ad

ಕಲಬುರ್ಗಿ ಹತ್ಯೆ ಪ್ರಕರಣ: ಸಮೀರ್ ಗಾಯಕ್‌ವಾಡ್ ಬಂಧನ ಸಾಧ್ಯತೆ

Update: 2016-01-07 23:53 IST

ಹುಬ್ಬಳ್ಳಿ, ಜ.7: ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣ ಸಂಬಂಧ ಆರೋಪಿಗಳ ಸುಳಿವು ಸಿಕ್ಕಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ಇಂದು ಹುಬ್ಬಳ್ಳಿಯಲ್ಲಿ ಸಭೆ ನಡೆಸಿದ್ದಾರೆ.


ಹುಬ್ಬಳ್ಳಿ ನಗರದಲ್ಲಿರುವ ಸರ್ಕಿಟ್ ಹೌಸ್‌ನಲ್ಲಿ ಸಿಐಡಿ ಎಸ್ಪಿ ಡಿ.ಸಿ. ರಾಜಪ್ಪನವರ ನೇತೃತ್ವದಲ್ಲಿ ಸಭೆ ಸೇರಿದ ಅಧಿಕಾರಿಗಳು, ಮಹಾರಾಷ್ಟ್ರದ ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆಂದು ಹೇಳಲಾಗಿರುವ ಸಮೀರ್ ಗಾಯಕ್‌ವಾಡ್, ಪನ್ಸಾರೆ ಹತ್ಯೆ ನಂತರ ನಡೆದ ಫೋನ್ ಸಂಭಾಷಣೆಯಲ್ಲಿ, ದೇವರು-ಧರ್ಮಕ್ಕೆ ವಿರುದ್ಧವಾಗಿ ಮಾತನಾಡುವ ವ್ಯಕ್ತಿಗಳ ಹತ್ಯೆ ಮಾಡುವುದಾಗಿ ಮಾತನಾಡಿರುವುದನ್ನು ಗಂಭೀರವಾಗಿ ಪರಿಗಣಿಸಿ, ಮಹಾರಾಷ್ಟ್ರ ಪೊಲೀಸರು ಎಫ್‌ಐಆರ್ ದಾಖಲಿಸಿರುವುದರ ಆಧಾರದ ಮೇಲೆ ಕರ್ನಾಟಕ ಸಿಐಡಿ ಪೊಲೀಸರು ಸಮೀರ್ ಗಾಯಕ್‌ವಾಡ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಲುವಾಗಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಡಾ. ಎಂ.ಎಂ. ಕಲಬುರ್ಗಿ ಮನೆಗೆ ಭೇಟಿ ನೀಡಿ, ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಭರವಸೆ ನೀಡಿದ ಬೆನ್ನಲ್ಲೇ ಸಿಐಡಿ ಅಧಿಕಾರಿಗಳ ಸಭೆ ನಡೆಸಿರುವುದು ಕುತೂಹಲ ಕೆರಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News