×
Ad

ರಾಷ್ಟ್ರೀಯ ವ್ಯಾಜ್ಯ ನೀತಿ ಜಾರಿ: ಡಿ.ವಿ.ಸದಾನಂದಗೌಡ

Update: 2016-01-08 22:24 IST

ಬೆಂಗಳೂರು, ಜ.8: ಸರಕಾರದ ವಿವಿಧ ಇಲಾಖೆಗಳ ನಡುವಿನ ಗೊಂದಲಗಳನ್ನು ನಿವಾರಿಸುವುದಕ್ಕಾಗಿ ರಾಷ್ಟ್ರೀಯ ವ್ಯಾಜ್ಯ ನೀತಿ ಜಾರಿ ಮಾಡುವುದಕ್ಕೆ ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
 ಬೆಂಗಳೂರು ವಕೀಲರ ಸಂಘ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಮತ್ತು ವಕೀಲರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸರಕಾರದ ಇಲಾಖೆಗಳಲ್ಲಿನ ಸಣ್ಣಪುಟ್ಟ ಗೊಂದಲಗಳಿಂದಾಗಿ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದು, ಅಭಿವೃದ್ಧಿ ಕಾರ್ಯಗಳು ವಿಳಂಬವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇಲಾಖೆಗಳ ನಡುವಿನ ಗೊಂದಲಗಳು ನ್ಯಾಯಾಲಯದ ಮೊರೆ ಹೋಗದೆ ಸಮಸ್ಯೆಗಳ ಪರಿಹಾರ ಕಂಡುಕೊಳ್ಳುವುದಕ್ಕಾಗಿ ರಾಷ್ಟ್ರೀಯ ವ್ಯಾಜ್ಯನೀತಿ ಜಾರಿ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಇದರಲ್ಲಿ ನನಗಂತೂ ಯಾವುದೇ ರೀತಿಯಲ್ಲೂ ಅಹಂ ಇಲ್ಲ. ದೇಶದಲ್ಲಿ 115 ನ್ಯಾಯಮೂರ್ತಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. 87 ನ್ಯಾಯಮೂರ್ತಿಗಳನ್ನು ಕಾಯಂ ಮಾಡಬೇಕಾಗಿದೆ. 472 ಖಾಲಿ ಹುದ್ದೆಗಳು ಭರ್ತಿ ಮಾಡಬೇಕಾಗಿದ್ದು, ಹಿಂದಿನ ನೇಮಕಾತಿ ನಿಯಮಗಳ ಮೂಲಕವೇ ನೇಮಕ ಮಾಡಲಾಗುವುದು. ಈ ಸಂಬಂಧ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಜೊತೆ ಚರ್ಚಿಸಲಾಗಿದೆ. ಮುಖ್ಯ ನ್ಯಾಯಮೂರ್ತಿಗಳಿಂದ ಸಲಹೆಗಳು ಬಂದ ತಕ್ಷಣ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದರು.
  ಕೋರ್ಟ್‌ಗಳ ಡಿಜಿಟಲೀಕರಣ: ದೇಶದಲ್ಲಿ ಎಲ್ಲ ನ್ಯಾಯಾಲಯಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಇಲ್ಲಿಯವರೆಗೆ 14 ಸಾವಿರಕ್ಕೂ ಹೆಚ್ಚು ಕೆಳ ಹಂತದ ನ್ಯಾಯಾಲಯಗಳಲ್ಲಿ ಕಂಪ್ಯೂಟರೀಕರಣ ಮಾಡಲಾಗಿದ್ದು, ಈ ಯೋಜನೆ ಅಭಿವೃದ್ಧಿಗೆ ಎರಡನೆ ಹಂತವಾಗಿ ರೂ.1,670 ಕೋಟಿಗಳನ್ನು ಮೀಸಲಿಡಲಾಗಿದೆ. ಭಾರತದ ದಕ್ಷಿಣ ಭಾಗಕ್ಕೆ ಚೆನ್ನೈನಲ್ಲಿರುವ ಸಾಲ ವಸೂಲಾತಿ ಮೇಲ್ಮನವಿ ಪ್ರಾಧಿಕಾರ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಸಂಚಾರಿ ಪೀಠಗಳನ್ನು ಬೆಂಗಳೂರಿನಲ್ಲಿ ಸ್ಥಾಪಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಅಡ್ವೋಕೇಟ್ಸ್ ಅಕಾಡಮಿ ಸ್ಥಾಪನೆ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
 ವಕೀಲರ ಸಂಘದ ಅಧ್ಯಕ್ಷ ಎಚ್.ಸಿ.ಶಿವರಾಮು, ದಕ್ಷಿಣ ಭಾರತ ವಿಭಾಗದ ಅಡಿಷನಲ್ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, ಅಡಿಷನಲ್ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ. ನಾವಡಗಿ ಮತ್ತಿತರರು ಉಪಸ್ಥಿರಿದ್ದರು. ಇದೇ ವೇಳೆ ಕೇಂದ್ರ ಸರಕಾರದ ದಕ್ಷಿಣ ಭಾರತದ ಅಡಿಷನಲ್ ಸಾಲಿಸಿಟರ್ ಜನರಲ್ ಕಚೇರಿ ಉದ್ಘಾಟನೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News