ಕರಾವಳಿಯನ್ನು ಕೋಮುಗಲಭೆಯಿಂದ ಮುಕ್ತಗೊಳಿಸಲು ಜನಾಂದೋಲನ
ಬೆಂಗಳೂರು, ಜ. 8: ರಾಜ್ಯದ ಅತಿಸೂಕ್ಷ್ಮ ಕೋಮುಗಲಭೆ ಪ್ರದೇಶವೆಂದು ಗುರುತಿ ಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೋಮುಗಲಭೆ, ಬಂದ್‌ಗಳಿಂದ ಮುಕ್ತಗೊಳಿಸಿ ಪುನಃ ಶಾಂತಿ ಸ್ಥಾಪನೆಗಾಗಿ ಜನಾಂದೋಲನವನ್ನು ರೂಪಿಸಲಾಗಿದೆ ಎಂದು ಸುದ್ದಿ ವೇದಿಕೆಯ ಸಂಚಾಲಕ ಡಾ.ಯು.ಪಿ.ಶಿವಾನಂದ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯು ಕಳೆದ 3-4 ತಿಂಗಳಿಂದ ಕೋಮು ಗಲಭೆ, ಬಲಾತ್ಕಾರದ ಬಂದ್‌ಗಳಿಂದ ತತ್ತರಿಸಿದೆ. ಇದರಿಂದ ಜಿಲ್ಲೆಯಾದ್ಯಂತ ಅಶಾಂತಿ ತಲೆದೋರಿದೆ. ಅಲ್ಲದೆ ಜನರ ಜೀವನ, ಮತ್ತು ಕೋಮು ಸೌಹಾರ್ದತೆ ಸಂಪೂರ್ಣ ಹದೆಗಟ್ಟಿದೆ ಎಂದು ಹೇಳಿದರು.
ಈ ಕಾರಣದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಬಂದ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸುದ್ದಿ ವೇದಿಕೆ ಜನಾಂದೋಲನವನ್ನು ರೂಪಿಸುತ್ತಿದ್ದು, ಜಿಲ್ಲೆಯ ಮೂರು ಪ್ರಮುಖ ತಾಲೂಕುಗಳಾದ ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿಗಳಲ್ಲಿ ಕಳೆದ ಎರಡು ತಿಂಗಳಿಂದ ಬಂದ್ ಮತ್ತು ಕೋಮುಗಲಭೆಗಳ ವಿರುದ್ಧ ಜನಾಭಿಪ್ರಾಯವನ್ನು ರೂಪಿಸುವ ಮೂಲಕ ಜನಾಂದೋಲನದ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.
ಬಂದ್ ಜನವಿರೋಧಿ ಚಟುವಟಿಕೆಯೆಂದು ಈಗಾಗಲೇ ನ್ಯಾಯಾಲಯಗಳು ಉಲ್ಲೇಖಿಸಿ, ಬಂದ್ ಕರೆ ಕೊಟ್ಟಾಗ ಆಗುವಂತಹ ಅನಾಹುತ, ನಷ್ಟಗಳಿಗೆ ಬಂದ್‌ಗೆ ಕರೆಕೊಟ್ಟವರೇ ಕಾರಣವೆಂದು ಆದೇಶಿಸಿದೆ. ಈ ಕಾರಣದಿಂದಾಗಿ ಬಂದ್‌ನ ಬೆಂಬಲಿ ಗರು ಬಲಾತ್ಕಾರದ ಬಂದ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯನ್ನು ಬಂದ್ ಮುಕ್ತಗೊಳಿಸಲು ಈಗಾಗಲೆ ಜಿಲ್ಲೆಯಾದ್ಯಂತ ವಿಚಾರಗೋಷ್ಠಿ, ಸಂವಾದ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸಲಾಗಿದೆ. ಅಲ್ಲದೆ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಧಾರ್ಮಿಕ ಮುಖಂಡರ ಬಳಿ ಬಂದ್‌ಗೆ ಕರೆ ನೀಡದಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.