×
Ad

ನಿರಾಣಿ ಶುಗರ್ಸ್ ವಿರುದ್ಧದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Update: 2016-01-08 22:31 IST

ಬೆಂಗಳೂರು, ಜ.8: ನಿರಾಣಿ ಶುಗರ್ಸ್ ಕಾರ್ಖಾನೆ ವಿರುದ್ಧ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ಶುಕ್ರ ವಾರ ತೆರವುಗೊಳಿಸಿ ಅರ್ಜಿಯನ್ನು ವಜಾಗೊಳಿಸಿದೆ. ನಿರಾಣಿ ಶುಗರ್ಸ್ ಕಾರ್ಖಾನೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನ್ಯಾ.ಅಶೋಕ್ ಬಿ. ಹಿಂಚಿಗೇರಿ ಅವರಿದ್ದ ಏಕಸದಸ್ಯ ಪೀಠ, ಈ ಮೇಲಿನ ಆದೇಶ ನೀಡಿದೆ.
ಸುಪ್ರೀಂಕೋರ್ಟ್ ಶುಗರ್ಸ್ ಕಾರ್ಖಾನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಮಧ್ಯಪ್ರವೇಶಿಸ ಬಾರದೆಂಬ ಆದೇಶ ವಿದ್ದರೂ ರಾಜ್ಯ ಸರಕಾರ ನಿರಾಣಿ ಶುಗರ್ಸ್ ಕಾರ್ಖಾನೆ ವಿರುದ್ಧವಾಗಿ ಹೈಕೋರ್ಟ್‌ನಲ್ಲಿ ತಡೆಯಾಜ್ಞೆಗೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ ತಡೆಯಾಜ್ಞೆಯನ್ನು ತೆರವುಗೊಳಿಸಿ ಅರ್ಜಿಯನ್ನು ವಜಾಗೊಳಿಸಿತು. ಸರಕಾರದ ಪರ ವಾದ ಮಂಡಿಸಿದ ವಕೀಲರು ಮೊದಲಿಗೆ ನಿರಾಣಿ ಶುಗರ್ಸ್ ಕಾರ್ಖಾನೆ ವಿರುದ್ಧ ಮಾತ್ರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಉಳಿದ ಶುಗರ್ಸ್ ಕಾರ್ಖಾನೆಗಳ ವಿರುದ್ಧವೂ ಅರ್ಜಿಗಳನ್ನು ಸಲ್ಲಿಸಲಾಗುವುದೆಂಬ ಮಾಹಿತಿಯನ್ನು ನ್ಯಾಯಮೂರ್ತಿಗಳ ಗಮನಕ್ಕೆ ತಂದರು. ನಿರಾಣಿ ಶುಗರ್ಸ್, ಗೋದಾವರಿ ಶುಗರ್ಸ್ ಹಾಗೂ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯ ಸಕ್ಕರೆ ಹರಾಜು ರದ್ದುಗೊಳಿಸಲಾಗಿದೆ ಎಂದು ಆ.28ರಂದು ಜಾಹೀರಾತು ನೀಡಲಾಗಿತ್ತು. ಆದರೆ ಎರಡು ದಿನದ ಬಳಿಕ ಮತ್ತೊಂದು ಜಾಹೀರಾತು ನೀಡಿ ಕೇವಲ ನಿರಾಣಿ ಶುಗರ್ಸ್ ಸಕ್ಕರೆ ಹರಾಜಿಗೆ ಟೆಂಡರ್ ಕರೆಯಲಾಯಿತು. ವಿಧಾನ ಪರಿಷತ್ ಚುನಾವಣೆಯ ಕಾರಣದಿಂದ ಪ್ರತಿಪಕ್ಷದ ಮುಖಂಡರಿಗೆ ಸೇರಿದ ಕಾರ್ಖಾನೆಯ ಸಕ್ಕರೆ ಹರಾಜು ಮಾಡಿ ಮುಜುಗರ ಮಾಡುವ ಪ್ರಯತ್ನಕ್ಕೆ ಸರಕಾರ ಮುಂದಾಗಿದೆ. ಆದರೆ, ಸಚಿವರೊಬ್ಬರ ಕಾರ್ಖಾನೆಗೆ ಸಂಬಂಧಿಸಿ ಮೌನ ತಾಳಿದೆ. ಸರಕಾರ ಇಂತಹ ನಡೆಗಳು ರಾಜಕೀಯ ಷಡ್ಯಂತ್ರವಾಗಿದೆ. ಅಲ್ಲದೆ, ನಿರಾಣಿ ಶುಗರ್ಸ್ ಕಾರ್ಖಾನೆ ಹೊರತುಪಡಿಸಿ ಉಳಿದ ಕಾರ್ಖಾನೆಗಳ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿಲ್ಲ ಎಂದು ಸಕ್ಕರೆ ಕಾರ್ಖಾನೆ ಪರ ವಕೀಲರು ವಾದಿಸಿದರು.
ನ್ಯಾಯಮೂರ್ತಿಗಳು ವಾದ ಪ್ರತಿವಾದವನ್ನು ಆಲಿಸಿ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸುಗರ್ಸ್ ಕಾರ್ಖಾನೆಗಳ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿ ಆದೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News