×
Ad

ಕೇಂದ್ರ ಸರಕಾರದ ಜೊತೆ ಚರ್ಚೆ: ಯಡಿಯೂರಪ್ಪ ಭರವಸೆ

Update: 2016-01-08 22:33 IST

ಬೆಂಗಳೂರು, ಜ.8: ದೇಶದ ಅತ್ಯುತ್ತಮ ಕಾರ್ಖಾನೆಗಳ ಪೈಕಿ ಒಂದಾಗಿರುವ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್(ಐಟಿಐ)ಯನ್ನು ಪುನಶ್ಚೇತನಗೊಳಿಸುವ ಸಂಬಂಧ ಕೇಂದ್ರ ಸರಕಾರದೊಂದಿಗೆ ಚರ್ಚೆ ನಡೆಸುವುದಾಗಿ ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಶುಕ್ರವಾರ ಕೆ.ಆರ್.ಪುರ ಸಮೀಪವಿರುವ ಐಟಿಐ ಕಾರ್ಖಾನೆಗೆ ಭೇಟಿ ನೀಡಿದ ಅವರು, ನೌಕರರ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿಯನ್ನು ಪಡೆದುಕೊಂಡರು. ಅವನತಿಯತ್ತ ಸಾಗುತ್ತಿರುವ ಐಟಿಐ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಐಟಿಐ ಕಾರ್ಖಾನೆಯೂ 1 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ವೌಲ್ಯದ ಆಸ್ತಿಯನ್ನು ಹೊಂದಿದೆ. ಈ ಕಾರ್ಖಾನೆಯಲ್ಲಿ 22 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಮಿಕರು ದುಡಿಯುತ್ತಿದ್ದಾರೆ. ಆದರೆ, ಇಂದು ಸಂಸ್ಥೆಯು ಶೇ.90ರಷ್ಟು ನಷ್ಟದಲ್ಲಿದ್ದು, ಕೇವಲ 1500 ಮಂದಿ ಕಾರ್ಮಿಕರಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಐಟಿಐ ಪುನಶ್ಚೇತನಕ್ಕೆ ಕೇಂದ್ರ ಸರಕಾರ ಗಂಭೀರವಾಗಿ ಚಿಂತನೆ ನಡೆಸಿದೆ. ಮುಂದಿನ ಬಜೆಟ್‌ನಲ್ಲಿ ಈ ವಿಚಾರವನ್ನು ಪ್ರಸ್ತಾ ಪಿಸುವಂತೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ನಡೆಸುತ್ತೇನೆ. ಅಗತ್ಯವಿದ್ದಲ್ಲಿ ರಾಜ್ಯದ ಎಲ್ಲ 28 ಸಂಸದರ ನಿಯೋಗದೊಂದಿಗೆ ಪ್ರಧಾನಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.
ಪ್ರತಿಷ್ಠಿತ ಐಟಿಐ ಕಾರ್ಖಾನೆಯ ಉಳಿವಿಗಾಗಿ ಪಕ್ಷಾತೀತ ಹೋರಾಟ ಮಾಡಲು ತಾನು ಸಿದ್ಧನಿದ್ದೇನೆ. ರಕ್ಷಣಾ ಇಲಾಖೆ ಯೂ ಈ ಕಾರ್ಖಾನೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಲ್ಲಿ, ಐಟಿಐ ಕಾರ್ಖಾನೆಯ ಪುನಶ್ಚೇತನ ಮಾಡಬಹುದು. ಅಲ್ಲದೆ, ರಕ್ಷಣಾ ಇಲಾಖೆಗೆ ಅಗತ್ಯವಿರುವ ಸಂಪರ್ಕ ಸಾಧನಗಳನ್ನು ತಯಾರಿಸುವ ಹೊಣೆಗಾರಿಕೆಯನ್ನು ಕೇಂದ್ರ ಸರಕಾರ ಐಟಿಐಗೆ ವಹಿಸಿದರೆ ಉತ್ತಮ ಎಂದು ಅವರು ಸಲಹೆ ನೀಡಿದರು.
ಕೇಂದ್ರ ರಕ್ಷಣಾ ಇಲಾಖೆಯ ಸಂಸದೀಯ ಸಮಿತಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಸದಸ್ಯರಾಗಿದ್ದಾರೆ. ಈ ಕಾರ್ಖಾನೆಯನ್ನು ಉಳಿಸುವ ದೃಷ್ಟಿಯಿಂದ ಈ ವಿಚಾರವನ್ನು ಅವರು ಸಮಿತಿಯ ಸಭೆಯಲ್ಲಿ ಪ್ರಸ್ತಾಪಿಸಲಿದ್ದಾರೆ. ನನ್ನ ಕಾರ್ಯ ವ್ಯಾಪ್ತಿಯಲ್ಲಿ ನಾನು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಯಡಿಯೂರಪ್ಪ ನುಡಿದರು.
ರಾಜ್ಯಕ್ಕೆ 1,540 ಕೋಟಿ ರೂ.ಅನುದಾನ: ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದಿಂದ 900ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಸರಕಾರವು ರಾಜ್ಯಕ್ಕೆ 1,540 ಕೋಟಿ ರೂ.ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಯಡಿಯೂರಪ್ಪ ತಿಳಿಸಿದರು.
ಐಟಿಐ ನೌಕರರ ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 1.39 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡನೆ ಮಾಡುವ ರಾಜ್ಯ ಸರಕಾರವು, ರೈತರಿಗೆ ನೆರವು ನೀಡಲು ಕೇಂದ್ರದ ಅನುದಾನವನ್ನು ನಿರೀಕ್ಷೆ ಮಾಡಿಕೊಂಡು ಕೂರುವ ಅಗತ್ಯವಿರಲಿಲ್ಲ ಎಂದರು.
ಕೇಂದ್ರ ಸರಕಾರ ನೀಡಿರುವ ಅನುದಾನವನ್ನು ಈಗಲಾದರೂ ಸದ್ಬಳಕೆ ಮಾಡಿಕೊಂಡು ಬರಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆದ್ಯತೆ ನೀಡಬೇಕು. ಪ್ರತಿಯೊಂದಕ್ಕೂ ಕೇಂದ್ರ ಸರಕಾರ, ಪ್ರಧಾನಿಯನ್ನು ದೂರು ವುದನ್ನು ಬಿಟ್ಟು, ರಾಜ್ಯ ಸರಕಾರ ತನ್ನ ಪಾಲಿನ ಕರ್ತವ್ಯವನ್ನು ಸಮ ರ್ಪಕವಾಗಿ ನಿರ್ವಹಿಸಲಿ ಎಂದು ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ, ಮಾಜಿ ಶಾಸಕ ಎನ್.ಎಸ್. ನಂದೀಶ್ ರೆಡ್ಡಿ, ಬಿಬಿಎಂಪಿ ಸದಸ್ಯ ಬಂಡೆ ರಾಜು, ಮುಖಂಡರಾದ ಕಲ್ಕೆರೆ ಎನ್.ಶ್ರೀನಿವಾಸ್, ಪಿ.ಡಿ.ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News