×
Ad

ಸರಕಾರಿ ಅಧಿಕಾರಿಗಳು-ಖಾಸಗಿ ಸಂಸ್ಥೆಗಳಿಂದ 10 ಸಾವಿರ ಎಕರೆ ಭೂಮಿ ಒತ್ತುವರಿ: ಕೋಳಿವಾಡ

Update: 2016-01-08 23:29 IST

ಕೆರೆಗಳೇ ನಾಪತ್ತೆ !


ಬೆಂಗಳೂರು, ಜ.8: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಸರಕಾರದ ವಿವಿಧ ಇಲಾಖೆಗಳು, ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪೆನಿಗಳ ಒಟ್ಟು 11,595 ಮಂದಿ 10,475 ಎಕರೆ ಕೆರೆಗಳ ಭೂಮಿಯನ್ನು ಒತ್ತುವರಿ ಮಾಡಿದ್ದು, ಇದರ ಮಾರುಕಟ್ಟೆ ವೌಲ್ಯ 1.50 ಲಕ್ಷ ಕೋಟಿ ರೂ. ಆಗಿದೆ ಎಂದು ಕೆರೆಗಳ ಒತ್ತುವರಿ ಮತ್ತು ಸಂರಕ್ಷಣೆ ಸದನ ಸಮಿತಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಬಹಿರಂಗಪಡಿಸಿದ್ದಾರೆ.


ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆರೆ ಭೂಮಿ ಒತ್ತುವರಿದಾರರು ಹಾಗೂ ಅವರಿಗೆ ಕುಮ್ಮಕ್ಕು ನೀಡಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕಾರಾಗೃಹ ಶಿಕ್ಷೆ ವಿಧಿಸಬೇಕು. ಅಲ್ಲದೆ, ಅವರ ಆಸ್ತಿ ಮುಟ್ಟುಗೋಲಿಗೂ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.


ಬೆಂ.ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಒಟ್ಟು 1,545 ಕೆರೆಗಳಿದ್ದು, ಆ ಪೈಕಿ ರಾಜ್ಯ ಸರಕಾರದ ವಿವಿಧ ಇಲಾಖೆಗಳೇ 3,287 ಎಕರೆ ಕೆರೆ ಭೂಮಿಯನ್ನು ಒತ್ತುವರಿ ಮಾಡಿವೆ. ಬಿಡಿಎ ಸೇರಿದಂತೆ ವಿವಿಧ ಇಲಾಖೆಗಳೇ ಕಂದಾಯ ಇಲಾಖೆಯಿಂದ ಅನುಮತಿ ಪಡೆಯದೆ, ಕಾನೂನು ಉಲ್ಲಂಘಿಸಿ ವಿವಿಧೆಡೆ ಕೆರೆ ಭೂಮಿ ಒತ್ತುವರಿ ಮಾಡಿ ನಿವೇಶನ ಅಭಿವೃದ್ಧಿಪಡಿಸಿ ಮಾರಾಟ ಮಾಡಿವೆ.


ಅಂತಹ ಭೂಮಿಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೂ ನಿವೇಶನ ಮಂಜೂರು ಮಾಡಿರುವುದು ಅಧ್ಯಯನದಿಂದ ಗೊತ್ತಾಗಿದೆ ಎಂದ ಕೋಳಿವಾಡ್, ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪೆನಿಗಳು, ಸರಕಾರದ ವಿವಿಧ ಇಲಾಖೆಗಳು ಹಾಗೂ ಖಾಸಗಿ ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ ಎಂದು ಹೇಳಿದರು.


ಆದರ್ಶ ಡೆವಲಪರ್ಸ್‌, ಪ್ರೆಸ್ಟೀಜ್ ಗ್ರೂಪ್, ಡಿಎಸ್ ಮ್ಯಾಕ್ಸ್, ಶೋಭಾ ಡೆವಲಪರ್ಸ್‌, ಬ್ರಿಗೇಡ್ ಗ್ರೂಪ್, ಒಬೆರಾಯ್ ಗ್ರೂಪ್, ಭಾಗಮನೆ ಟೆಕ್ ಪಾರ್ಕ್, ಆರ್‌ಎನ್‌ಎಸ್ ಮೋಟಾರ್ಸ್‌, ನಿಸರ್ಗಧಾಮ ಎಸ್ಟೇಟ್, ನಂದಿನಿ ಅಪಾರ್ಟ್ ಮೆಂಟ್, ವಂದನಾ ಸಾಗರ ಅಪಾರ್ಟ್‌ಮೇಟ್, ಗ್ರಾಸ್ ಹೋಪರ್ ಕಂಪೆನಿ, ಅದ್ವೈತ ಗ್ರೂಪ್, ವಾಲ್ ಮಾರ್ಟ್ ಗ್ರೂಪ್, ಗ್ರೀನ್‌ವುಡ್ ಗ್ರೂಪ್, ಬಿಆರ್ ವ್ಯಾಲಿ ಪಾರ್ಕ್, ಶ್ರೀರಾಮ, ಐಶ್ವರ್ಯ ಡೆವಲಪರ್ಸ್‌, ಓಯಸಿಸ್ ಅಪಾರ್ಟ್‌ಮೆಂಟ್, ಫ್ಯಾಟಸಿ, ಲೇಕ್‌ವ್ಯೆವ್ ಹಾಗೂ ಮಹಾಲಕ್ಷ್ಮಿ ಅಪಾರ್ಟ್‌ಮೆಂಟ್ ಸೇರಿವೆ ಎಂದು ವಿವರ ನೀಡಿದರು.


ಗೆಜೆಟ್‌ನಲ್ಲಿ ಪ್ರಕಟ: ಕೆರೆ ಒತ್ತುವರಿ ಮಾಡಿಕೊಂಡಿರುವವರ ಎಲ್ಲ ಮಾಹಿತಿಯನ್ನು ಗೆಜೆಟ್‌ನಲ್ಲಿ ಪ್ರಕಟಿಸಲಾಗುವುದು ಎಂದ ಕೋಳಿವಾಡ್, ಬೆಂಗಳೂರಿನಲ್ಲಿದ್ದ ಕೆರೆಗಳ ಬಗ್ಗೆ ಯಾವುದೇ ಮಾಹಿತಿ, ದಾಖಲೆಗಳೇ ಇರಲಿಲ್ಲ. ಆದರೂ, ಸದನ ಸಮಿತಿ ಮೂಲ ಸರ್ವೇ ದಾಖಲೆಗಳನ್ನು ಆಧರಿಸಿ ಕೆರೆಗಳನ್ನು ಭೂಮಿ ಸಂರಕ್ಷಣೆಗೆ ನಿಟ್ಟಿನಲ್ಲಿ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದೆ ಎಂದು ವಿವರಿಸಿದರು.


ಒತ್ತುವರಿದಾರರಿಗೆ ವಿವರಣೆ ಕೋರಿ ಸ್ವಾಭಾವಿಕ ನ್ಯಾಯದನ್ವಯ ನೋಟಿಸ್ ಜಾರಿ ಮಾಡುತ್ತಿದ್ದು, ಜ.31ರೊಳಗಾಗಿ ವಿವರಣೆ ನೀಡಬೇಕೆಂದು ಸೂಚಿಸಲಾಗಿದೆ ಎಂದ ಕೋಳಿವಾಡ್, ಕೆರೆಗಳ ಸಾರ್ವಜನಿಕರ ಆಕ್ಷೇಪಣೆ, ಅಹವಾಲುಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ತಹಶೀಲ್ದಾರ್ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಲಾಗಿದೆ.


ಆ ಸಮಿತಿ ನೀಡುವ ಮಾಹಿತಿಯನ್ನು ಉಪ ವಿಭಾಗಾಧಿಕಾರಿಗಳು ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸದನ ಸಮಿತಿಗೆ ರವಾನಿಸಲಿದ್ದು, ಒತ್ತುವರಿ ಆಗಿರುವ ಕೆರೆ ಭೂಮಿ ತೆರವು ಸೇರಿದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಿತಿ ತೀರ್ಮಾನ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.


ಬೆಂ.ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿನ 1,545 ಕೆರೆಗಳ 57,576 ಎಕರೆ ವಿಸ್ತೀರ್ಣದ ಭೂಮಿಯಿದ್ದು, ಆ ಪೈಕಿ 10,472 ಎಕರೆ ಒತ್ತುವರಿ ಆಗಿದೆ. 3,287 ಎಕರೆ ರಾಜ್ಯ ಸರಕಾರದ ವಿವಿಧ ಇಲಾಖೆಗಳು, 7,185 ಎಕರೆ ಭೂಮಿಯನ್ನು ಖಾಸಗಿ ವ್ಯಕ್ತಿಗಳನ್ನು ಒತ್ತುವರಿ ಮಾಡಿದ್ದಾರೆಂದು ಅವರು ಮಾಹಿತಿ ನೀಡಿದರು.


ಒತ್ತುವರಿ ಮಾಡಿಕೊಂಡ ಕಂಪೆನಿಗಳು


ಆದರ್ಶ ಡೆವಲಪರ್ಸ್‌, ಪ್ರೆಸ್ಟೀಜ್ ಗ್ರೂಪ್, ಡಿಎಸ್ ಮ್ಯಾಕ್ಸ್, ಶೋಭಾ ಡೆವಲಪರ್ಸ್‌, ಬ್ರಿಗೇಡ್ ಗ್ರೂಪ್, ಒಬೆರಾಯ್ ಗ್ರೂಪ್, ಭಾಗಮನೆ ಟೆಕ್ ಪಾರ್ಕ್, ಆರ್‌ಎನ್‌ಎಸ್ ಮೋಟಾರ್ಸ್‌, ನಿಸರ್ಗಧಾಮ ಎಸ್ಟೇಟ್, ನಂದಿನಿ ಅಪಾರ್ಟ್ ಮೆಂಟ್, ವಂದನಾ ಸಾಗರ ಅಪಾರ್ಟ್‌ಮೇಟ್, ಗ್ರಾಸ್ ಹಾಪರ್ ಕಂಪೆನಿ, ಅದ್ವೈತ ಗ್ರೂಪ್, ವಾಲ್ ಮಾರ್ಟ್ ಗ್ರೂಪ್, ಗ್ರೀನ್‌ವುಡ್ ಗ್ರೂಪ್, ಬಿಆರ್ ವ್ಯಾಲಿ ಪಾರ್ಕ್, ಶ್ರೀರಾಮ, ಐಶ್ವರ್ಯ ಡೆವಲಪರ್ಸ್‌, ಓಯಸಿಸ್ ಅಪಾರ್ಟ್ ಮೆಂಟ್, ಫ್ಯಾಂಟಸಿ, ಲೇಕ್‌ವ್ಯೆ ಹಾಗೂ ಮಹಾಲಕ್ಷ್ಮಿ ಅಪಾರ್ಟ್‌ಮೆಂಟ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News