ಭಯೋತ್ಪಾದನೆ ಶಂಕೆ: ವೌಲಾನ ಸೆರೆ
ಬೆಂಗಳೂರು, ಜ. 8: ಶಂಕಿತ ಭಯೋತ್ಪಾದಕ ಚಟುವಟಿಕೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳದಿಂದ ಬಂಧಿತರಾಗಿರುವ ಬನಶಂಕರಿಯ ಇಲ್ಯಾಸ್‌ನಗರದ ಈದ್ಗಾ ಮಸೀದಿಯ ವೌಲಾನ ಸೈಯದ್ ಅನ್ಝರ್‌ಶಾ ಖಾಸ್ಮಿಯನ್ನು ಜ.20ರವರೆಗೆ ಪೊಲೀಸ್ ಕಸ್ಟಡಿಗೆ ವಹಿಸಿ ಹೊಸದಿಲ್ಲಿಯ ಪಟಿಯಾಲ ನ್ಯಾಯಾಲಯ ಆದೇಶ ಹೊರಡಿಸಿದೆ.
ಎರಡು ದಿನಗಳ ಹಿಂದೆ ರಾಜ್ಯದ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಎನ್‌ಐಎ ಪೊಲೀಸರು ಅನ್ಝರ್‌ಶಾರನ್ನು ಬನಶಂಕರಿಯಿಂದ ಬಂಧಿಸಿ ಹೊಸದಿಲ್ಲಿಗೆ ಕರೆದುಕೊಂಡು ಹೋಗಿದ್ದರು. ಪ್ರಚೋದನಾಕಾರಿ ಭಾಷಣದ ಹಿನ್ನೆಲೆಯಲ್ಲಿ 2012ರಲ್ಲಿ ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ಅನ್ಝರ್‌ಶಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಭಯೋತ್ಪಾದನೆ ಚಟುವಟಿಕೆ ಹಿನ್ನೆಲೆಯಲ್ಲಿ ಬಂಧಿತನಾಗಿರುವ ವೌಲಾನಾ ಸೈಯದ್ ಅನ್ಝರ್ ಷಾ ಖಾಸ್ಮಿ ಅವರ ದೇಶದ್ರೋಹದ ದೂರಿನ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಮಸೀದಿಯ ಟ್ರಸ್ಟಿ ನಯಾಝ್ ಪಾಷ ತಿಳಿಸಿದ್ದಾರೆ.
ಅನ್ಝರ್‌ಷಾ ದೇಶದ್ರೋಹದ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಬಗ್ಗೆ ನಮಗೆ ಯಾವುದೇ ಮಾಹಿತಿಯಿರಲಿಲ್ಲ. ಮಾಧ್ಯಮಗಳಲ್ಲಿ ಸುದ್ದಿ ನೋಡಿದಾಗಷ್ಟೇ ತಿಳಿದಿದೆ. ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಕಳೆದ 14 ತಿಂಗಳ ಹಿಂದೆಯೇ ಇವರನ್ನು ವೌಲ್ವಿ ಕೆಲಸದಿಂದ ತೆಗೆದು ಹಾಕಲಾಗಿತ್ತು. ಅದರೆ, ಅವರ ಕುಟುಂಬ ಸದಸ್ಯರ ಮನವಿ ಹಿನ್ನೆಲೆಯಲ್ಲಿ ಮತ್ತೆ ಕೆಲಸಕ್ಕೆ ಸೇರಿಸಲಾಗಿತ್ತು. ಅಷ್ಟನ್ನು ಹೊರತುಪಡಿಸಿ ನಮಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಹೋರಾಟ: ವೌಲಾನ ಸೈಯದ್ ಅನ್ಝರ್‌ಶಾ ಪ್ರಕರಣದಲ್ಲಿ ಅವರ ಪರವಾಗಿ ನ್ಯಾಯಾಂಗ ಹೋರಾಟ ನಡೆಸಲು ಅಖಿಲ ಭಾರತ ಜಮೀಯತ್ ಉಲೇಮಾ ಹಿಂದ್ ನಿರ್ಧರಿಸಿದೆ. ಸಂಘಟನೆಯ ಅಧ್ಯಕ್ಷ ವೌಲಾನ ಅರ್ಶದ್ ಮದನಿ ಸಲಹೆಯಂತೆ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಗುಲ್ಝಾರ್ ಆಝ್ಮಿ ಅವರು ಖ್ಯಾತ ವಕೀಲ ಎಂ.ಎಸ್.ಖಾನ್ ಅವರನ್ನು ನೇಮಿಸಿದ್ದಾರೆ.