×
Ad

ಮನೆಮುರುಕರು ಮತ್ತು ಮಂಗಳೂರು ಮಲ್ಲಿಗೆ

Update: 2016-01-09 09:31 IST

ತುಳುನಾಡಿನ ಪೂರ್ವದಿಕ್ಕಿಗೆ ರಮ್ಯಾದ್ಭುತ ಪಶ್ಚಿಮಘಟ್ಟಗಳ ಸಾಲು, ಪಶ್ಚಿಮಕ್ಕೆ ದಣಿವರಿಯದ ಕಡಲು, ಉತ್ತರಕ್ಕೆ ಸಂಯಮದ ಕಲ್ಯಾಣಪುರ ನದಿ ಮತ್ತು ದಕ್ಷಿಣಕ್ಕೆ ಇದೀಗ ಪರಕೀಯವಾಗಿರುವ ಚಂದ್ರಗಿರಿ ನದಿ. ಇವುಗಳ ನಡುವೆ ಸುಮಾರು 60 ಕಿ.ಮೀ. ಉದ್ದ, 50 ಕಿ.ಮೀ. ಅಗಲಕ್ಕೆ ಹರಡಿಕೊಂಡಿರುವ, ಭತ್ತದ ಗದ್ದೆ, ಅಡಿಕೆ ತೋಟ, ತೆಂಗುಗಳ ಸಾಲುಗಳಿರುವ ನಿತ್ಯ ಹರಿದ್ವರ್ಣದ ಸದಾ ಚಲನಶೀಲವಾಗಿರುವ ಪುಟ್ಟ ಊರು ತುಳುನಾಡು. ನಾಡಿನ ಯಾವುದೇ ಮೂಲೆಯಿಂದ ಇನ್ನೊಂದು ಮೂಲೆಗೆ ಅರ್ಧ ದಿವಸದಲ್ಲಿ ಆರಾಮವಾಗಿ ಓಡಾಡಬಹುದಾದಷ್ಟೇ ದೊಡ್ಡ ಊರಿದು. ಪ್ರಸ್ತುತ ತಲಪಾಡಿಯಿಂದ ದಕ್ಷಿಣ ಭಾಗವು ಕಾಸರಗೋಡಾಗಿ ಕೇರಳಕ್ಕೆ ಸೇರಿದೆ. ಉಳಿದ ತುಳುನಾಡು ದಕ್ಷಿಣಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳಾಗಿ ಒಡೆದಿದೆ. ಇಂಥ ಸ್ಥಿತಿಯಲ್ಲಿ ತುಳುನಾಡನ್ನು ಇದೀಗ ಆಕ್ರಮಿಸಿಕೊಂಡ ಭಯಾನಕ ಪಿಡುಗು ಕೋಮುವಾದ. ಈ ಬೆಳೆವಣಿಗೆ ತುಳುನಾಡಿನ ಚರಿತ್ರೆಗೆ ಮಸಿ ಬಳಿದು, ಜಗತ್ತಿನಾದ್ಯಂತ ತುಳುವರು ನಾಚಿ ತಲೆತಗ್ಗಿಸುವಂತೆ ಮಾಡಿದೆ. ಕರಾವಳಿಯನ್ನು ಆಧುನಿಕತೆ ಬಹಳ ಬೇಗ ಆವರಿಸಿಕೊಂಡಿತ್ತು. ಟಿಪ್ಪೂವಿನ ಮರಣಾ ನಂತರ (1799) ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ಈ ಜಿಲ್ಲೆ ಮತ್ತೆಂದೂ ತಿರುಗಿ ನೋಡಲಿಲ್ಲ. ಬಾಸೆಲ್ ಮಿಶನ್ನಿನ ಪಾದ್ರಿಗಳು ಮುದ್ರಣಯಂತ್ರ, ಹಂಚಿನ ಕಾರ್ಖಾನೆಗಳನ್ನು ಮಂಗಳೂರಲ್ಲಿ ಆರಂಭಿಸುವುದರೊಂದಿಗೆ ಕೆನರಾದ ಜನಕ್ಕೆ ಉದ್ಯಮಶೀಲತೆಮತ್ತು ವ್ಯವಹಾರ ನೈಪುಣ್ಯವನ್ನು ಕಲಿಸಿಕೊಟ್ಟರು. ಇಲ್ಲಿನ ಮುಸ್ಲಿಂ ವ್ಯಾಪಾರಿಗಳು ಕರಾವಳಿಯನ್ನು ಜಗತ್ತಿನ ಇತರ ಭಾಗಗಳಿಗೆ ಜೋಡಿಸಿದರು. 20ನೇ ಶತಮಾನದ ಆರಂಭಕ್ಕೆ ಈ ಜಿಲ್ಲೆ ಆಧುನಿಕ ವಿದ್ಯೆಗೆ ತನ್ನನ್ನು ತೆರೆದುಕೊಂಡಿತು. ಇಲ್ಲಿನ ಹುಡುಗರು ಕಷ್ಟಪಟ್ಟು ನಾಲ್ಕಕ್ಷರ ಕಲಿತರು. ಕಡವು ದಾಟಿದರು, ದೋಣಿ ಹಿಡಿದರು, ಪತ್ತೆಮಾರಿ ಹತ್ತಿದರು, ಹಡಗಿನಲ್ಲಿ ಸಾಗಿದರು, ಮುಂಬೈ ತಲುಪಿದರು, ದುಬೈಗೆ ಹಾರಿದರು. ಹೋದಲ್ಲೆಲ್ಲ ತಮಗಾದ ಅವಮಾನಗಳನ್ನು ಸಹಿಸಿಕೊಂಡು, ತುಂಬಾ ಕಷ್ಟಪಟ್ಟು ದುಡಿದರು, ಹಂತಹಂತವಾಗಿ ಮೇಲೇರಿದರು. ಹೀಗೆ ತುಳುನಾಡಿನ ಜನರು ವಿದ್ಯೆಯ ಮೂಲಕ ಪ್ರವರ್ಧಮಾನಕ್ಕೆ ಬಂದ ಕತೆ ಅತ್ಯಂತ ರೋಚಕವಾದುದು. ಮಕ್ಕಳು ವಿದ್ಯೆ ಕಲಿತು ಮುಂಬೈಗೆ ವಲಸೆ ಹೋದ ಆನಂತರ ಅವರು ವರುಷಕ್ಕೊಮ್ಮೆ ಹಿಂದೆ ಬರುವುದನ್ನು ಕಾಯುತ್ತಾ ಕುಳಿತಿರುವ ವೃದ್ಧ ತಂದೆ-ತಾಯಿ, ಅಜ್ಜ-ಅಜ್ಜಿಯರ ಮೌನರೋದನಕ್ಕೆ ಕಿವಿಗೊಟ್ಟವರು ಡಾ. ಶಿವರಾಮ ಕಾರಂತರು. ಅವರ ಕಾದಂಬರಿಗಳು ಕರಾವಳಿ ಕರ್ನಾಟಕದ ಜೀವನ ಮತ್ತು ರೋದನಗಳ ಅಸಾಮಾನ್ಯ ಕಥನಗಳು. ಜೊತೆಗೆ ಸಾಮಾನ್ಯ ಜನರ ಕಥನ ನಿರೂಪಣೆಗಳಿಗೆ ಈ ಪುಟ್ಟ ಊರಿನಲ್ಲಿ ಇಂದಿಗೂ ಜನಪ್ರಿಯವಾಗಿರುವ ಸುಮಾರು 400ಕ್ಕೂ ಹೆಚ್ಚಿನ ಭೂತಗಳು ಹೇಳುವ ಪಾಡ್ದನಗಳಿಗೆ ಕಿವಿ ಕೊಡಬೇಕು. ಅವು ತಮ್ಮ ಕತೆ ಹೇಳುತ್ತಾ, ಭೂಮಿಯ ಮೇಲೆ ಆಗಾಗ ಪ್ರತ್ಯಕ್ಷವಾಗುತ್ತಾ, ದೆಹಲಿ, ದುಬೈ, ಮುಂಬೈಯಂಥ ಮಹಾನಗರಗಳಿಂದ ಆಗಮಿಸುವ ಭಕ್ತಾದಿಗಳಿಗೆ ಅಭಯ ಪ್ರದಾನ ಮಾಡುತ್ತವೆ. ಓಟದ ಕೋಣಗಳ ಸ್ಪರ್ಧೆ-ಕಂಬಳಕ್ಕೆ ಹೋಗುವ, ಕೋಳಿಕಟ್ಟದಲ್ಲಿ ಕೋಳಿಯ ಮೇಲೆ ಲಕ್ಷಾಂತರ ರೂಪಾಯಿಗಳ ಬಾಜಿ ಕಟ್ಟುವ, ಮಂಜುನಾಥನ ಹೆಸರಿನಲ್ಲಿ ಆಣೆ ಮಾಡುವ ಆಧುನಿಕ ಯುವಕರು ಈ ಜಿಲ್ಲೆಯ ಉದ್ದಗಲಕ್ಕೂ ಕಂಡುಬರುತ್ತಾರೆ.

ತುಳುನಾಡಿನ ಉದ್ಯಮಶೀಲತೆಗೆ ಅಲ್ಲಿ ಹುಟ್ಟಿಕೊಂಡ ಬ್ಯಾಂಕುಗಳೇ ಒಳ್ಳೆಯ ಉದಾಹರಣೆ. ಇಲ್ಲಿ ಸುಮಾರು 21 ಬ್ಯಾಂಕ್‌ಗಳು ಜನ್ಮ ತಾಳಿವೆ. ಇದರ ಜೊತೆಗೆ ಅಡಿಕೆ, ಬೀಡಿ ಉದ್ಯಮ, ಗೇರುಬೀಜ ಕಾರ್ಖಾನೆ, ಕೈಮಗ್ಗಗಳ ಕಾರ್ಖಾನೆ, ರಬ್ಬರ್, ಕೋಕೋ ಬೆಳೆ ಮತ್ತಿತರ ಉದ್ಯಮಗಳು ಜಿಲ್ಲೆಯ ಸಾವಿರಾರು ಮಂದಿಯ ಬದುಕನ್ನು ಹಸನುಗೊಳಿಸಿವೆ. ಪ್ರಖ್ಯಾತವಾದ ಉಡುಪಿ ಹೊಟೇಲ್‌ಗಳು ಜಗತ್ತಿನಾದ್ಯಂತ ಪ್ರಸಿದ್ಧವಾಗಿವೆ. ತುಳುನಾಡಿನ ಬುದ್ಧಿವಂತಜನರಿಗೆ ಪುರುಸೊತ್ತುಎಂದರೇನೆಂದೇ ತಿಳಿಯದು. ಹೀಗೆ ತುಳುನಾಡು ಬೆಳೆದಿದೆ. 20ನೇ ಶತಮಾನದ ಮೊದಲ ಎರಡು ತಲೆಮಾರುಗಳು ಆ ಪ್ರದೇಶಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟಿವೆ. 70ರ ದಶಕದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ಬಂದ ಭೂಮಸೂದೆಯು ಆ ಕಾಲದ ಗೇಣೀದಾರರನ್ನೂ, ಭೂಮಾಲಕರನ್ನೂ ಜಾಗ್ರತೆಯಾಗಿ ಬದುಕುವಂತೆ ಮಾಡಿತು. ಆದರೆ 80ರ ದಶಕದ ಬಳಿಕದ ಕಾಲಘಟ್ಟದಲ್ಲಿ ಕಾರಣಾಂತರದಿಂದ ಹೊರ ನಾಡಿನ ವಲಸೆ ಕಡಿಮೆ ಅಥವಾ ಇಲ್ಲವಾಯಿತು. ಹೊಸ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಸರಕಾರ ವಿಫಲವಾಯಿತು.

ಇದೇ ಕಾಲಘಟ್ಟದಲ್ಲಿ ಕಾಣಿಸಿಕೊಂಡ ವ್ಯಾಪಾರೀ ಮನೋಭಾವದ ಶಿಕ್ಷಣ ಸಂಸ್ಥೆಗಳು ಅನೇಕರಿಗೆ ಉನ್ನತ ಶಿಕ್ಷಣ ನೀಡಿದರೂ ಅದರ ಫಲವೋ ಎಂಬಂತೆ, ನಿರುದ್ಯೋಗವೂ ಹೆಚ್ಚಿತು. ಅನೇಕರಿಗೆ ಈ ಶಿಕ್ಷಣ ದೊರಕಲೂ ಇಲ್ಲ. ಹೀಗೆ ಒಂದೆಡೆ ಉದ್ಯೋಗವಿಲ್ಲದೆ ಒದ್ದಾಡುತ್ತಿದ್ದ, ಇನ್ನೊಂದೆಡೆ ಉನ್ನತ ಶಿಕ್ಷಣಕ್ಕೆ ಅವಕಾಶ ದೊರಕದೆ ಕೊರಗುತ್ತಿದ್ದ ಹೊಸ ತಲೆಮಾರನ್ನು ಕೋಮುವಾದಿಗಳು ತಡಮಾಡದೆ ಅಪ್ಪಿಕೊಂಡರು. ಕಾರಣ ಅಮಾಯಕ ಹುಡುಗರು ಜಾತಿವಾದಿಗಳೂ, ಕೋಮುವಾದಿಗಳೂ ಆಗುತ್ತಾ, ಮೇಲ್ವರ್ಗ ಮತ್ತು ಮೇಲ್ಜಾತಿ ಜನರ ಕೈಯ ಸಾಧನಗಳಾಗಿ ಬೆಳೆಯಲಾರಂಭಿಸಿದರು. ಕೆಲಸವಿಲ್ಲದ ಹೊಸ ತಲೆಮಾರು ನೈತಿಕತೆ ಮತ್ತು ಸಂಸ್ಕೃತಿ ಸಂರಕ್ಷಣೆಯ ಹೆಸರಲ್ಲಿ ತಮ್ಮ ಜೀವನೋಪಾಯಕ್ಕಾಗಿ ಹಫ್ತಾ ವಸೂಲಿಗೆ ಇಳಿದಿದೆ. ಹಲವರಿಗೆ ಕೋಮುವಾದ ಇಂದು ಕೇವಲ ಮತಗಳ ನಡುವಣ ಘರ್ಷಣೆಯೂ ಅಲ್ಲ, ಸಂಸ್ಕೃತಿ ರಕ್ಷಣೆಯೂ ಅಲ್ಲ, ಬದಲು ಸುಲಭವಾಗಿ ಹಣಮಾಡುವ ವಿಧಾನ. ಇದು ತುಳುನಾಡಿನ ಆಧುನಿಕ ತಲೆಮಾರು ಸ್ವಯಂ ವಿನಾಶದ ಕಡೆಗೆ ಚಲಿಸುತ್ತಿರುವುದರ ಸಂಕೇತ. ಕೆಲಸವಿಲ್ಲದ ಹುಡುಗರು ತಮ್ಮ ಕೀಳರಿಮೆಯಿಂದ ಆಕ್ರಮಣಕಾರೀ ಪ್ರಜ್ಞೆಯನ್ನು ಬೆಳೆಸಿಕೊಂಡು, ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ. ನಿರುದ್ಯೋಗ ಬೆಳೆದಂತೆ ಕೋಮುವಾದವೂ ಹೆಚ್ಚಾಗುತ್ತಿದೆ. ಅದಕ್ಕೆ ಜಾತಿಯ ಶ್ರೀರಕ್ಷೆ. ಈ ಬೆಳೆವಣಿಗೆಗಳು ಮುಂದಿನ ದಿನಗಳ ರಕ್ತಸಿಕ್ತ ಇತಿಹಾಸಕ್ಕೆ ನಾವೇ ಬರೆದುಕೊಳ್ಳುತ್ತಿರುವ ಮುನ್ನುಡಿ. ಸರಕಾರವು ಈ ವಿಷಯದಲ್ಲಿ ಗಂಭೀರವಾಗಿ ಯೋಚಿಸುತ್ತಿಲ್ಲ. ಏಕೆಂದರೆ ಎಷ್ಟೋ ಬಾರಿ ಕೋಮುವಾದದ ಬೆಳೆವಣಿಗೆಯ ಮೇಲೆಯೇ ಸರಕಾರವೂ ನಿಂತಿರುತ್ತದೆ. ಉದ್ಯೋಗಗಳನ್ನು ಸೃಷ್ಟಿಮಾಡಿ, ಯುವಕರನ್ನು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿದರೆ, ಕೋಮುವಾದ ತನ್ನಿಂದ ತಾನೇ ಕಡಿಮೆಯಾಗುತ್ತದೆ. ಆದರೆ ಸರಕಾರಕ್ಕೆ ಅಂಥ ಮುನ್ನೋಟವಿಲ್ಲ. ಬದಲಾಗಿ ಅದು ಕೋಮುವಾದಿಗಳಿಂದಲೇ ಮಾರ್ಗದರ್ಶನ ಪಡೆಯುವ, ಕೋಮುವಾದಿಗಳನ್ನು ಸಂರಕ್ಷಿಸುವ ಕೆಲಸ ಮಾಡುತ್ತಾ ನಾಡಿನ ಜನರ ಬದುಕನ್ನು ಅಧೋಗತಿಗೆ ತಳ್ಳುತ್ತಿದೆ. 

ಕೋಮುವಾದಿಗಳಿಗೆ ಧರ್ಮ ನೈತಿಕತೆ ಇತ್ಯಾದಿಗಳು ಮೂಲತಃ ಒಂದು ವ್ಯಾಪಾರವಲ್ಲದೆ ಮತ್ತೇನೂ ಅಲ್ಲ. ತುಳುನಾಡಿನಿಂದ ಕಾರಣಾಂತರಗಳಿಂದ ಹೊರಗೆ ಹೋಗಿ ಬದುಕುತ್ತಿರುವ ಜನರು ದೊಡ್ಡ ಸಂಖ್ಯೆಯಲ್ಲಿ ಇಂದು ಜಗತ್ತಿನಾದ್ಯಂತ ಕಾಣಸಿಗುತ್ತಾರೆ. ಅದು ಹೋಟೆಲ್ ಉದ್ಯಮವೇ ಇರಬಹುದು ಅಥವಾ ಇನ್ನೇನೋ ಇರಬಹುದು. ಒಮ್ಮೆ ನಾನು ಇಸ್ರೇಲ್‌ನ ಹೀಬ್ರೂ ವಿಶ್ವವಿದ್ಯಾಲಯಕ್ಕೆ ಹೋಗುವ ಹಾದಿಯಲ್ಲಿ ಜೋರ್ಡಾನ್‌ನ ಇತಿಹಾಸ ಪ್ರಸಿದ್ಧ ಅಮಾನ್ ನಗರದಲ್ಲಿ ಒಂದು ದಿನ ಉಳಕೊಳ್ಳಬೇಕಾಯಿತು. ಕಾರಣ ಅಲ್ಲಿನ ರೋಮನ್ ಆಂಫಿ ಥಿಯೇಟರ್ ಮತ್ತು ಜಗತ್ಪ್ರಸಿದ್ಧ ಪೆಟ್ರಾವನ್ನು ನೋಡಲು ನಿರ್ಧರಿಸಿದೆ. ನಾನು ಉಳಕೊಂಡಿದ್ದ ಹೊಟೇಲ್‌ನಿಂದ ಟ್ಯಾಕ್ಸಿಯೊಂದನ್ನು ಬುಕ್ ಮಾಡಿದೆ. ನಿಗದಿತ ಸಮಯಕ್ಕೆ ಟ್ಯಾಕ್ಸಿ ಬಂತು. ನಗರ ನೋಡಲು ಅನುಕೂಲ ಅಂತ ಕಾರಿನ ಇದಿರು ಸೀಟಲ್ಲಿ ಕುಳಿತೆ. ಒಂದೆರಡು ನಿಮಿಷದಲ್ಲಿಯೇ ಟ್ಯಾಕ್ಸಿ ಚಾಲಕ ಸಂಕೋಚದಿಂದ ಕೇಳಿದ, ನೀವು ಕರ್ನಾಟಕದವರೇ?ನಾನು ಅವಾಕ್ಕಾಗಿ, ಹೌದು ಎಂದೆ. ಆತ ಮತ್ತೆ ಕೇಳಿದ, ಕರ್ನಾಟಕದಲ್ಲಿ ಎಲ್ಲಿ?ನಾನು, ದಕ್ಷಿಣಕನ್ನಡ ಜಿಲ್ಲೆಎಂದೆ. ಆತ ಮತ್ತೆ ಕೇಳಿದ, ದಕ್ಷಿಣ ಕನ್ನಡದಲ್ಲಿ ಎಲ್ಲಿ?ನಾನು, ಸುಬ್ರಹ್ಮಣ್ಯಎಂದೆ. ಕುತೂಹಲ ತಡೆಯಲಾರದೆ ನಾನೂ ಕೇಳಿದೆ, ನೀವು ಎಲ್ಲಿ?ಆತ ತುಳುವಿನಲ್ಲಿ ಹೇಳತೊಡಗಿದ, ನನ್ನ ಊರು ಮೂಡಬಿದಿರೆ, ಹೆಸರು ವೆಂಕಪ್ಪ, ಇಲ್ಲಿ ವೆಂಕಿ ಅಂತ ಕರೆಯುತ್ತಾರೆ, ಕಳೆದ ಆರು ವರ್ಷಗಳಿಂದ ಇಲ್ಲಿದ್ದೇನೆ, ನಿಮ್ಮ ಕೈಯಲ್ಲಿದ್ದ ಕನ್ನಡ ಪುಸ್ತಕ ನೋಡಿ, ಕರ್ನಾಟಕದವರಿರಬೇಕು ಅಂದುಕೊಂಡೆ. ವೆಂಕಿಯ ಉಪಕಾರದಿಂದ ಅಮಾನ್ ನಗರದ ನನ್ನ ಪ್ರವಾಸ ಎಂದೂ ಮರೆಯದಂತಾಯಿತು.

 ಮಂಗಳೂರಲ್ಲಿ ಪುಂಡರು ಹೆಣ್ಣುಮಕ್ಕಳ ಮೇಲೆ ಕೈ ಮಾಡಿದ ಮರುದಿನ ಬೆಳಿಗ್ಗೆ ವೆಂಕಿ ಅಮಾನ್‌ನಿಂದ ದೂರವಾಣಿಯಲ್ಲಿ ಮಾತಾಡಿದ್ದರು. ಇಲ್ಲಿ ಅದು ದೊಡ್ಡ ಸುದ್ದಿ, ನಮಗೆಲ್ಲ ನಾಚಿಕೆಯಾಗುತ್ತಿದೆ. ನಮ್ಮ ಊರು ಯಾಕೆ ಹೀಗಾಗುತ್ತಿದೆ? ಊರಿಗೆ ಹೋಗಲು ಮನಸ್ಸಾಗುತ್ತಿಲ್ಲ. ಈ ಜೋರ್ಡಾನ್ ಹೇಳಿ ಕೇಳಿ ಮುಸ್ಲಿಂ ದೇಶ. ಆದರೆ ಇಲ್ಲಿ ಇಂಥ ಘಟನೆಗಳು ಯಾವತ್ತೂ ನಡೆದಿಲ್ಲಅಂತ ತಮ್ಮ ಅಳಲು ತೋಡಿಕೊಂಡರು. ಇದು ತುಳುನಾಡಿನಿಂದ ಹೊರಗೆ ಹೋಗಿ ಮರ್ಯಾದೆಯಿಂದ ಜಗತ್ತಿನಾದ್ಯಂತ ಕೆಲಸ ಮಾಡುತ್ತಿರುವವರಿಗೆ ಕೋಮುವಾದಿಗಳು ನೀಡಿದ ಕೊಡುಗೆ. ಕರಾವಳಿಯ ಈ ಬೆಳೆವಣಿಗೆಗಳು ನಾವೆಲ್ಲ ನಮ್ಮ ಹುಟ್ಟಿದೂರಿನ ಬಗ್ಗೆ ಹೇಸಿಕೆ ಪಟ್ಟುಕೊಳ್ಳುವಂತೆ ಮಾಡಿದೆ. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಗೆಳೆಯ ಡಾ. ರಾಕೇಶ್ ರಂಜನ್ ನನಗೊಂದು ಇಮೇಲ್ ಕಳಿಸಿದ್ದರು–  
 

ಅಮೆರಿಕಾದಲ್ಲಿ ನಿನ್ನೂರು ಸುದ್ದಿಯಲ್ಲಿದೆ, ನೀನೂ ತುಳುವ ಅಲ್ಲವೇ? ಪ್ರತಿಭಟಿಸಿ ಒಂದು ಪತ್ರವನ್ನಾದರೂ ಬರೆ. ನಾನವರಿಗೆ ಬರೆದೆ, ಗೆಳೆಯಾ ಯಾರಿಗೋಸ್ಕರ ಬರೆಯುವುದು? ನಾನು ಏನು ಬರೆಯುತ್ತೇನೆ ಅಂತ ನಿನ್ನಂತಹವರಿಗೆ ಚೆನ್ನಾಗಿ ಗೊತ್ತು. ನಾವು ಬರೆದರೆ ಓದುವವರು ನಮ್ಮ ಗೆಳೆಯರು. ಅವರೆಲ್ಲ ನಮ್ಮ ಹಾಗೇ ಯೋಚಿಸುವವರಾದ್ದರಿಂದ ಅವರಿಗೆ ಬರೆಹದ ಅಗತ್ಯವಿಲ್ಲ. ಕೋಮುವಾದಿಗಳು ನಮ್ಮಂತಹವರು ಬರೆದದ್ದನ್ನು ಓದುವುದಿಲ್ಲ, ಓದಿದ್ದರೆ ಹೀಗೆ ಮಾಡುತ್ತಿರಲಿಲ್ಲ. ಬರವಣಿಗೆಯ ಮೇಲೆ ವಿಶ್ವಾಸ ಕಡಿಮೆಯಾಗುತ್ತಿದೆ. ಹೀಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರಿನ ಪ್ರಸಿದ್ಧಿಗೆ ಇನ್ನಿಲ್ಲದ ಧಕ್ಕೆಯಾಗಿದೆ. ನಾವೆಲ್ಲ ನಮಗೆ ಸಿಕ್ಕಿದ ವೇದಿಕೆಗಳಲ್ಲಿ ತುಳುನಾಡಿನ ಬಗ್ಗೆ ಯಾವಾಗಲೂ ಬಹಳ ಅಭಿಮಾನದಿಂದ ಮಾತನಾಡುತ್ತೇವೆ. ಕಾರ್ನಾಡ್ ಸದಾಶಿವ ರಾವ್, ಕುದ್ಮುಲ್ ರಂಗರಾವ್, ಕಮಲಾದೇವಿ ಚಟ್ಟೋಪಾಧ್ಯಾಯ, ಉಳ್ಳಾಲ ಶ್ರೀನಿವಾಸ ಮಲ್ಯ, ಡಾ ಶಿವರಾಮ ಕಾರಂತ, ಯಕ್ಷಗಾನ, ಭೂತಾರಾಧನೆ ಮತ್ತಿತರ ವ್ಯಕ್ತಿ ಮತ್ತು ವಿಷಯಗಳ ಬಗ್ಗೆ ಮಾತನಾಡುವುದೆಂದರೆ ನಮಗೆಲ್ಲ ಇನ್ನಿಲ್ಲದ ಸಂತೋಷ. ಉಡುಪಿ ಸಮೀಪದ ಕೊಡವೂರಿನ ಅನಂತ ಪದ್ಮನಾಭ ಭಟ್ಟರು ಮಹಾಪಂಡಿತ ರಾಹುಲ ಸಾಂಕೃತಾಯನರ ಸಹಾಯದಿಂದ ಸಂಸ್ಕೃತ ಓದಿ, ಶ್ರೀಲಂಕಾಕ್ಕೆ ಹೋಗಿ, ಅಲ್ಲಿಂದ ಮುಂದೆ ಜರ್ಮನಿಗೆ ತೆರಳಿ, ಹಿಟ್ಲರ್‌ನೊಂದಿಗೆ ಕೆಲಸ ಮಾಡಿ, ಎರಡನೇ ಮಹಾಯುದ್ಧದಲ್ಲಿ ಸೋತು, ಓಡಿ ಹೋಗಿ, ಎಲ್ಲೋ ಅನಾಮಿಕರಾಗಿ ಸತ್ತು ಹೋದ ಕತೆಯನ್ನು ಕು.ಶಿ.ಹರಿದಾಸ ಭಟ್ಟರು ತಮ್ಮದೇ ಶೈಲಿಯಲ್ಲಿ ನಗುತ್ತಾ ನಿರೂಪಿಸುತ್ತಿದ್ದರು. ಒಂದು ಸಣ್ಣ ಊರಿನ ಅಸಾಮಾನ್ಯ ಸಾಧನೆಗಳ ಬಗ್ಗೆ ಮಾತಾಡುವಾಗ ಜನರೂ ಕುತೂಹಲದಿಂದ ಕೇಳುತ್ತಾರೆ. ಆದರೆ ಈಗ ನಮ್ಮ ಬಾಯಿ ಕಟ್ಟಿದೆ.

ಹೀಗೆ ಮಾಡುವುದರಿಂದ ಕೋಮುವಾದಿಗಳಿಗೆ ಆಗುವ ಲಾಭವಾದರೂ ಏನು? ಅಂತ ಅವರ ಪರವಾಗಿಯೂ ಯೋಚಿಸತೊಡಗಿದರೆ ಅದಕ್ಕೂ ಉತ್ತರ ದೊರೆಯುವುದಿಲ್ಲ. ತಾವು ದರೋಡೆ ಮಾಡಿ ತಂದ ಸಾಮಾನುಗಳು ಇವರಿಗೆ ಎಷ್ಟು ದಿನ ಸಾಕಾದೀತು? ಇವರು ಮಾಡುವ ಆಕ್ರಮಣಗಳು ಬದಲಾಗುತ್ತಿರುವ ಸಮಾಜವನ್ನು ಮತ್ತೆ ಹಿಂದಕ್ಕೆ ಎಂದೆಂದೂ ಕೊಂಡೊಯ್ಯಲಾರವು, ಈ ಮಂದಿಗಳಿಗೆ ಸಮಾಜವನ್ನು ತಮಗೆ ಬೇಕಾದಂತೆ ಬದಲಾಯಿಸುವ ಶಕ್ತಿ ಎಂದೂ ಬಾರದು. ಭಾರತೀಯ ಸಮಾಜ ಇಂಥವರನ್ನು ತಿರಸ್ಕರಿಸಿ ಶತಮಾನಗಳಿಂದ ಬೆಳೆದುಬಂದಿದೆ, ಮುಂದೆಯೂ ಬೆಳೆಯಲಿದೆ.

ಇದೀಗ ಪತನಮುಖಿಯಾಗುತ್ತಿರುವ ಕರಾವಳಿ ಕರ್ನಾಟಕವನ್ನು ನಾವೀಗ ಮತ್ತೆ ಪುರೋಗಾಮಿಯಾಗಿಸಬೇಕಾಗಿದೆ. ಕೋಮುವಾದ ಮತ್ತು ಜಾತೀವಾದದ ಬೆಂಕಿಯಲ್ಲಿ ಉರಿದು ನಲುಗುತ್ತಿರುವ ಹೊಸತಲೆಮಾರಿನ ಹುಡುಗರನ್ನು ಹೊಸ ಅರಿವಿನ ಕಡೆಗೆ ಕರೆದೊಯ್ಯಬೇಕಾಗಿದೆ. ಕರಾವಳಿಯ ಪುಟ್ಟ ಮಂಗಳೂರು ಮಲ್ಲಿಗೆ ಎಲ್ಲೆಡೆಯೂ ಪ್ರಸಿದ್ಧ. ಅದನ್ನು ಒಂದು ಕೋಮಿನವರು ಬೆಳೆಸುತ್ತಾರೆ, ಇನ್ನೊಂದು ಕೋಮಿನವರು ಸಾಗಾಣಿಕೆ ಮಾಡುತ್ತಾರೆ, ಮತ್ತೊಂದು ಕೋಮಿನವರು ಮಾರಾಟ ಮಾಡುತ್ತಾರೆ. ಮಲ್ಲ್ಲಿಗೆಯ ಪರಿಮಳ ಎಲ್ಲೆಡೆಯೂ ಪಸರಿಸಿಕೊಳ್ಳುತ್ತದೆ. ಈ ಅರ್ಥದಲ್ಲಿ ಮಂಗಳೂರು ಮಲ್ಲಿಗೆಯು ಕೋಮು ಸೌಹಾರ್ದತೆಗೊಂದು ಸಂಕೇತ. ಆದರೆ ಮನೆಮುರುಕರು ಇಂದು ಮಂಗಳೂರು ಮಲ್ಲಿಗೆಯ ಸುವಾಸನೆಯನ್ನು ದುರ್ವಾಸನೆಯನ್ನಾಗಿ ಪರಿವರ್ತಿಸಿದ್ದಾರೆ. ಇದು ನಮ್ಮ ಆತಂಕಕ್ಕೆ ಕಾರಣ.

Writer - ಡಾ. ಪುರುಷೋತ್ತಮ ಬಿಳಿಮೆಲೆ

contributor

Editor - ಡಾ. ಪುರುಷೋತ್ತಮ ಬಿಳಿಮೆಲೆ

contributor