×
Ad

ಬಾಲಾಪರಾಧಿಗಳ ವಯೋಮಿತಿ ಇಳಿಕೆ ಅಗತ್ಯ: ಸಂತೋಷ್‌ಹೆಗ್ಡೆ

Update: 2016-01-09 23:13 IST

ಬೆಂಗಳೂರು, ಜ.9: ದೇಶದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಕೇಂದ್ರ ಸರಕಾರವು ಬಾಲಾಪರಾಧಿಗಳ ವಯೋಮಿತಿಯನ್ನು 14ಕ್ಕೆ ಇಳಿಸುವುದು ಅಗತ್ಯ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾ.ಎನ್. ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಆನೇಕಲ್ ತಾಲೂಕಿನ ಗುಳಿಮಂಗಲ ಗ್ರಾಮದಲ್ಲಿರುವ ಎನ್.ಎ.ಗ್ಲೋಬಲ್ ಕಾನೂನು ಶಾಲೆಯಲ್ಲಿ ಆಯೋಜಿಸಲಾಗಿದ್ದ ‘ಭಾರತದ ಉದ್ಯಾನ ನಗರಿ ಬೆಂಗಳೂರು, ಅಪರಾಧದ ರಾಜಧಾನಿಯಾಗಿ ಮಾರ್ಪಡುತ್ತಿದ್ದೆಯೇ?’ ಎಂಬ ಚರ್ಚಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಆಧುನಿಕ ಜೀವನ ಶೈಲಿಯಿಂದಾಗಿ ಅತ್ಯಂತ ಕ್ಷಿಪ್ರ ಗತಿಯಲ್ಲಿ ಮಕ್ಕಳ ಬೆಳವಣಿಗೆಯಾಗುತ್ತಿದೆ. ತಂತ್ರಜ್ಞಾನದ ಸಹಾಯದಿಂದ ಮಕ್ಕಳು ಇಂದು ಕಡಿಮೆ ವಯಸ್ಸಿನಲ್ಲೇ ಜಾಗತಿಕ ಮಟ್ಟದ ಸಾಕಷ್ಟುವಿಷಯಗಳನ್ನು ತಿಳಿದುಕೊಳ್ಳುತ್ತಿದ್ದಾರೆ. ಕೇಂದ್ರ ಸರಕಾರವು ಈಗಾಗಲೇ ಬಾಲಾಪರಾಧಿಗಳ ವಯೋಮಿತಿಯನ್ನು 16ಕ್ಕೆ ಇಳಿಸಿದೆ. ಇದನ್ನು 14ಕ್ಕೆ ಇಳಿಸಿದರೆ ಮತ್ತಷ್ಟು ಅನುಕೂಲವಾಗುತ್ತದೆ ಎಂದು ಹೆಗ್ಡೆ ಹೇಳಿದರು.
ಕುಸಿಯುತ್ತಿರುವ ನೈತಿಕ ವೌಲ್ಯಗಳು:

ಸಮಾಜದಲ್ಲಿ ನೈತಿಕ ವೌಲ್ಯಗಳು ಕುಸಿಯುತ್ತಿವೆ. ಮಾನವೀಯ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತಿವೆ. ನಮ್ಮ ಕಲಿಕಾ ಅವಧಿಯಲ್ಲಿ ಸಮಾಜ ವಿಜ್ಞಾನ ವನ್ನು ಬೋಧಿಸಲಾಗುತ್ತಿತ್ತು. ಆದರೆ, ಇಂದು ಯಾವ ಶಾಲೆಯ ಲ್ಲೂ ಈ ವಿಷಯವನ್ನು ಬೋಧಿಸುತ್ತಿಲ್ಲ ಎಂದು ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು. ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯಾಗಿದೆ. ಯುವಕರು ಹಾಗೂ ಯುವತಿಯರು ಪರಸ್ಪರ ಗೌರವಿಸುವುದನ್ನು ಕಲಿಯ ಬೇಕು. ಪೋಷಕರು ಹಾಗೂ ಶಿಕ್ಷಕರು ಶಾಲಾ ಹಂತದಲ್ಲೆ ಮಕ್ಕಳಲ್ಲಿಸಾಮಾಜಿಕ ವೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಮುಂದಾಗಬೇಕು. ಆಗ ಮಾತ್ರ ನಾಗರಿಕ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚು ತ್ತಿರುವುದು ಆತಂಕಕಾರಿ. ಮಹಿಳೆಯರು, ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಅಪರಾಧಿಗಳಲ್ಲಿ ಕಾನೂ ನಿನ ಬಗ್ಗೆ ಭಯ ಮೂಡುವಂತೆ ಮಾಡಬೇಕು ಎಂದು ಅವರು ಕರೆ ನೀಡಿದರು.

 ಅತ್ಯಾಚಾರ ಪ್ರಕರಣದ ಆಪರಾಧಿಗಳಿಗೆ ಚೀನಾದಲ್ಲಿ ಮರಣದಂಡನೆ ವಿಧಿಸಲಾಗುತ್ತದೆ. ಇದರಿಂದ, ಅಪರಾಧ ಪ್ರಕರಣಗಳೇನೂ ಇಳಿಮುಖವಾಗಿಲ್ಲ. ಸಾಮಾಜಿಕ ಪರಿವರ್ತನೆ ಯೊಂದಿಗೆ, ನ್ಯಾಯಾಂಗ ವ್ಯವಸ್ಥೆಯಲ್ಲೂ ಸುಧಾರಣೆಯಾಗ ಬೇಕು. ಭ್ರಷ್ಟಾಚಾರ, ಅತ್ಯಾಚಾರ ಸೇರಿದಂತೆ ಯಾವುದೇ ಪ್ರಕರಣ ವಿರಲಿ ನ್ಯಾಯಾಲಯದಲ್ಲಿ ತ್ವರಿತವಾಗಿ ವಿಚಾರಣೆ ನಡೆದು ಅಪರಾಧಿಗಳಿಗೆ ಶಿಕ್ಷೆ ವಿಧಿಸುವಂತಾಗಬೇಕು ಎಂದರು.
ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ವಿಧಾನಪರಿಷತ್‌ನ ಮಾಜಿ ಸದಸ್ಯ ಅಬ್ದುಲ್ ಅಝೀಮ್ ಮಾತನಾಡಿ, ನಿವೃತ್ತರ ಪಾಲಿಗೆ ಸ್ವರ್ಗವಾಗಿದ್ದ ಬೆಂಗಳೂರು ಇಂದು ಅಪರಾಧ ಪ್ರಕರಣಗಳಿಂದಾಗಿ ಸದ್ದು ಮಾಡುತ್ತಿದೆ. ನ್ಯಾಯಾಂಗ, ಪೊಲೀಸ್ ಹಾಗೂ ಶಾಸಕಾಂಗ ಚುರುಕಾದಾಗ ಮಾತ್ರ ಇಂತಹ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ ಎಂದರು.
ಅಪರಾಧ ಪ್ರಕರಣಗಳ ಹೆಚ್ಚಳದಿಂದ ಆತಂಕಕ್ಕೆ ಒಳಗಾಗಿರುವ ಜನ ಸಾಮಾನ್ಯರಲ್ಲಿ ಆತ್ಮವಿಶ್ವಾಸ ಮೂಡಿಸುವುದರ ಜೊತೆಗೆ ಸಮಾಜಘಾತುಕ ಶಕ್ತಿಗಳಲ್ಲಿ ಭಯದ ವಾತಾವರಣವನ್ನು ನಿರ್ಮಾಣ ಮಾಡಬೇಕು. ಆಗ ಮಾತ್ರ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯ ಎಂದು ಅವರು ಹೇಳಿದರು.
ಚರ್ಚಾಗೋಷ್ಠಿಯಲ್ಲಿ ಎನ್.ಎ.ಗ್ಲೋಬಲ್ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಎಂ.ಅಲ್ತಾಫ್ ಹುಸೇನ್, ಉಪಾಧ್ಯಕ್ಷೆ ನಸೀಮುನ್ನಿಸಾ, ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಟಿ.ಆರ್.ಸುಬ್ರಹ್ಮಣ್ಯ, ರಾಷ್ಟ್ರೀಯ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಎಚ್.ಆರ್.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News