‘ಫೆಲೆಸ್ತೀನ್‌ಗಾಗಿ ಜ.13ರಂದು ಸ್ವಾತಂತ್ರ ಜಾಥಾ’
ಬೆಂಗಳೂರು, ಜ.9: ಫೆಲೆಸ್ತೀನ್‌ನ ಫ್ರೀಡಂ ಥಿಯೇಟರ್, ಹೊಸದಿಲ್ಲಿಯ ಜನಮ್ ನಾಟ್ಯ ಮಂಚ್ ಸಹಯೋಗದೊಂದಿಗೆ ಜ.13ರಿಂದ 16ರವರೆಗೆ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಸಾಂಸ್ಕೃತಿಕ ಕಲಾ ಪ್ರದರ್ಶನವನ್ನು ಏರ್ಪಡಿಸಿದೆ.
ಜ.13ರಂದು ಸಂಜೆ 5 ಗಂಟೆಗೆ ಸಾಂಸ್ಕೃತಿಕ ಕಲಾ ಪ್ರದರ್ಶನಕ್ಕೆ ಚಾಲನೆ ಸಿಗಲಿದೆ. ಫೆಲೆಸ್ತೀನ್‌ನ ಪಶ್ಚಿಮ ತಡಿಯ ಜೆನಿನ್‌ನ ನಿರಾಶ್ರಿತರ ಬಿಡಾರದಲ್ಲಿ ಈ ಫ್ರೀಡಂ ಥಿಯೇಟರ್ ಇದೆ. 2006 ರಲ್ಲಿ ಪ್ರಾರಂಭವಾದ ಇದು ಇಂದು ಜಗತ್ತಿನಲ್ಲೇ ಬಹುದೊಡ್ಡ ರೆಪರ್ಟರಿ (ಸಂಚಾರಿ ರಂಗತಂಡ) ಕಂಪೆನಿಯಾಗಿದೆ ಎಂದು ಸಮುದಾಯ ತಂಡದ ಪ್ರಧಾನ ಕಾರ್ಯದರ್ಶಿ ಟಿ.ಸುರೇಂದ್ರರಾವ್ ತಿಳಿಸಿದ್ದಾರೆ.
ಫ್ರೀಡಂ ಥಿಯೇಟರ್‌ನ ಚೇತೋಹಾರಿ ಕಲಾವಿದ ಹಾಗೂ ಮುಖಂಡ ಜೂಲಿಯಾನೊ ಮೆರ್‌ಖುಸ್ 2011ರಲ್ಲಿ ರಂಗಮಂದಿರದ ಎದುರುಗಡೆಯೇ ಗುಂಡಿಗೆ ಬಲಿಯಾದರು. ‘ಕಲೆ ಹಾಗೂ ಸಂಸ್ಕತಿಯನ್ನೇ ಆಯುಧಗಳನ್ನಾಗಿ ಬಳಸಿ ಸ್ವಾತಂತ್ರ್ಯ ಹೋರಾಟಗಾರರನ್ನು ತರಬೇತುಗೊಳಿಸುವುದು ಫ್ರೀಡಂ ಥಿಯೇಟರ್‌ನ ಮುಖ್ಯ ಉದ್ದೇಶವೆಂದು ಜೂಲಿಯಾನೊ ನಂಬಿದ್ದರು’ ಎಂದು ಅವರು ಹೇಳಿದ್ದಾರೆ. ಜನಮ್-ಜನ ನಾಟ್ಯ ಮಂಚ್: ಕಳೆದ ಮೂರು ನಾಲ್ಕು ದಶಕಗಳಿಂದ ಹೊಸದಿಲ್ಲಿಯ ಪ್ರಮುಖವಾಗಿ ಬೀದಿ ನಾಟಕಗಳ ಮೂಲಕ ಜನಪರ ಉದ್ದೇಶಗಳೊಂದಿಗೆ ಚಟುವಟಿಕೆ ನಡೆಸುತ್ತಿರುವ ಸಾಂಸ್ಕೃತಿಕ ತಂಡ ಜನಮ್. ಇದರ ಸಂಸ್ಥಾಪಕ ಸಫ್ದರ್ ಹಾಶ್ಮಿ ಬೀದಿ ನಾಟಕ ಮಾಡುತ್ತಿರುವಾಗಲೇ ದುಷ್ಕರ್ಮಿಗಳ ಗುಂಡಿಗೆ ಬಲಿಯಾದರು ಎಂದು ಸುರೇಂದ್ರರಾವ್ ತಿಳಿಸಿದ್ದಾರೆ.
ಫ್ರೀಡಂ ಥಿಯೇಟರ್ ರಂಗಶಾಲೆಯ 8 ಜನ ಕಲಾವಿದರು ಮತ್ತು ಹೊಸದಿಲ್ಲಿಯ ಜನ ನಾಟ್ಯ ಮಂಚ್ ದೇಶದ ವಿವಿಧ ನಗರಗಳಲ್ಲಿ ಜ.1ರಿಂದ ಜಂಟಿಯಾಗಿ ಫ್ರೀಡಂ ಜಾಥಾ ಹೆಸರಿನಲ್ಲಿ ಪ್ರದರ್ಶನಗಳನ್ನು ನೀಡುತ್ತಿವೆ. ಇದು ಭಾರತ ಫೆಲೆಸ್ತೀನಿನ ಮೊಟ್ಟ ಮೊದಲ ಜಂಟಿ ರಂಗ ಸಂಚಾರವಾಗಿದೆ ಎಂದು ಅವರು ಹೇಳಿದ್ದಾರೆ.
ಜನ ನಾಟ್ಯ ಮಂಚ್ ಮತ್ತು ಫ್ರೀಡಂ ಥಿಯೇಟರ್ ಜಂಟಿ ಪ್ರಯತ್ನದ ಈ ಕಾರ್ಯಕ್ರಮದಲ್ಲಿ ಬೊಂಬೆಯಾಟಗಾರ್ತಿ ಅನುರೂಪಾರಾಯ್ ಅವರಿಂದ ಬೊಂಬೆಯಾಟ, ಫೆಲೆಸ್ತೀನ್‌ನ ಜಾನಪದ ನೃತ್ಯ ಹಾಗೂ ಕನ್ನಡ ಬೀದಿ ನಾಟಕಗಳ ಪ್ರದರ್ಶನವು ಒಳಗೊಂಡಿವೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.