×
Ad

ಮಂಡ್ಯ: ಇಬ್ಬರು ರೈತರ ಆತ್ಮಹತ್ಯೆ

Update: 2016-01-09 23:17 IST

ಮಂಡ್ಯ, ಜ.9: ಸಾಲಬಾಧೆ, ಬೆಳೆದ ಕೃಷಿ ಉತ್ಪನ್ನಗಳ ಬೆಲೆ ಹಾಗೂ ರೇಷ್ಮೆ ಗೂಡಿನ ದರ ಕುಸಿತದಿಂದ ಕಂಗಾಲಾದ ರೈತರ ಆತ್ಮಹತ್ಯೆ ಸರಣಿ ಜಿಲ್ಲೆಯಲ್ಲಿ ಮುಂದುವರಿದಿದ್ದು, ಶನಿವಾರ ಇಬ್ಬರು ರೈತರು ಆತ್ಮಹತ್ಯೆ ಸರಣಿ ಪಟ್ಟಿಗೆ ಸೇರಿದ್ದಾರೆ.

ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದ ನಾಥಪ್ಪ(50) ಹಾಗೂ ಸಾದೊಳಲು ಗ್ರಾಮದ ಶಿವಲಿಂಗಯ್ಯ(55) ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ರೈತರು. ವಳಗೆರೆಹಳ್ಳಿ ಗ್ರಾಮದ ನಾಥಪ್ಪಕೇವಲ 30 ಗುಂಟೆ ಜಮೀನು ಹೊಂದಿರುವ ರೈತನಾಗಿದ್ದು, ಕುಟುಂಬ ನಿರ್ವಹಣೆಗೆ ಇತರೆ ರೈತರ ಜಮೀನು ಗೇಣಿ ಪಡೆದು ಕಬ್ಬು, ರೇಷ್ಮೆ, ಇತರೆ ಬೆಳೆ ಬೆಳೆದಿದ್ದರು. ಆದರೆ, ಬೆಳೆಗೆ ಸೂಕ್ತ ಬೆಲೆ ಸಿಗದೆ ತೊಂದರೆಗೆ ಸಿಲುಕಿದ್ದರು.
ತನ್ನ ಗ್ರಾಮದ ಕೃಷಿಪತ್ತಿನ ಸಹಕಾರ ಸಂಘದಲ್ಲಿ 25 ಸಾವಿರ ರೂ., ಸ್ವ-ಸಹಾಯ ಸಂಘ ಹಾಗೂ ಖಾಸಗಿ ವ್ಯಕ್ತಿಗಳಿಂದ ಸುಮಾರು 70 ಸಾವಿರ ರೂ. ಸಾಲ ಮಾಡಿ ಬೆಳೆ ಬೆಳೆದಿದ್ದ ನಾಥಪ್ಪ, ಕಬ್ಬು ಸರಬರಾಜು ಹಣ ಕೈಸೇರದೆ, ರೇಷ್ಮೆಗೆ ದರವಿಲ್ಲದೆ ನಷ್ಟ ಅನುಭವಿಸಿದ್ದರು.

ಕೃಷಿಗಾಗಿ ಸಾವಿರಾರು ರೂ.ಗಳ ಸಾಲ ಮಾಡಿದ್ದ ನಾಥಪ್ಪ ಅವರಿಗೆ ಸಾಲಗಾರರ ಕಾಟ ಜಾಸ್ತಿಯಾಗಿತ್ತು ಎನ್ನಲಾಗಿದ್ದು, ಸಾಲ ತೀರಿಸಲು ಬೇರೆ ದಾರಿ ತೋಚದೆ, ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೆಂದು ಕುಟುಂಬದವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
 ಸಾದೊಳಲು ಗ್ರಾಮದ ಶಿವಲಿಂಗಯ್ಯ(55) ಅವರು ಕಬ್ಬು, ಭತ್ತ, ರೇಷ್ಮೆ ಬೆಳೆಗಾರರಾಗಿದ್ದು, ಕೃಷಿ ಚಟುವಟಿಕೆಗಾಗಿ ಸುಮಾರು 2.5 ಲಕ್ಷ ರೂ. ಸಾಲ ಮಾಡಿಕೊಂಡಿದ್ದು, ತೀವ್ರ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ.
ಬೆಳೆದ ಬೆಳೆಗೆ ಉತ್ತಮ ದರ ದೊರಕದೆ ನಷ್ಟ ಅನುಭವಿಸಿದ್ದ ಶಿವಲಿಂಗಯ್ಯ, ಸಾಲಗಾರರ ಕಾಟ ಮಿತಿಮೀರಿದ ಹಿನ್ನೆಲೆಯಲ್ಲಿ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೆಂದು ಪೊಲೀಸರಿಗೆ ದೂರು ನೀಡಲಾಗಿದೆ.
ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News