×
Ad

ಹವಾಲಾ ದಂಧೆ: 13 ಮಂದಿ ಆರೋಪಿಗಳ ಬಂಧನ; 1 ಕೋಟಿ ರೂ.ನಗದು ವಶ

Update: 2016-01-10 23:54 IST

ಬೆಂಗಳೂರು, ಜ.10: ಸರಕಾರಕ್ಕೆ ಯಾವುದೇ ರೀತಿಯ ತೆರಿಗೆಯನ್ನು ಪಾವತಿಸದೆ ಹವಾಲಾ ದಂಧೆ ನಡೆಸುತ್ತಿದ್ದ 13 ಜನ ಆರೋಪಿಗಳನ್ನು ಬಂಧಿಸಿ 1 ಕೋಟಿ ರೂ.ನಗದನ್ನು ವಶಪಡಿಸಿಕೊಂಡಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಬಂಧಿತರನ್ನು ರಾಜಸ್ಥಾನ ಮೂಲದವರಾದ ಆರ್.ಧರ್ಮೇಂದರ್(42), ಚಂಪಾಲಾಲ್(30), ಮಹದೇವ್(22), ಜೀತುಸಿಂಗ್(18), ಚಿತ್ರದುರ್ಗದ ವಿಕ್ರಮ್(21), ಹೆಗ್ಗನಹಳ್ಳಿ ಕ್ರಾಸ್‌ನ ಅರುಣ್‌ಕುಮಾರ್(36), ಲಗ್ಗೆರೆ ಪ್ರಕಾಶ್(30), ಚಿಕ್ಕಬಳ್ಳಾಪುರ ಗೋಪಾಲ್(36), ಹನುಮಂತನಗರ ದಿನೇಶ್(46), ಕಾಮಾಕ್ಷಿಪಾಳ್ಯ ಪುರುಷೋತ್ತಮ್(45), ತ್ಯಾಗರಾಜನಗರ ಸುನೀಲ್(42), ಅವಿನ್ಯೂ ರಸ್ತೆ ಭಗವಾನ್(30), ಕಬ್ಬನ್‌ಪೇಟೆ ಕುನಾಲ್‌ಸಿಂಗ್(34) ಎಂದು ಗುರುತಿಸಲಾಗಿದೆ.

ಆರೋಪಿಗಳು ನಗರ್ತಪೇಟೆಯಲ್ಲಿ ಅಂಗಡಿಯೊಂದನ್ನು ತೆರೆದು ದೇಶದ ಅನಧಿಕೃತ ಹಣವನ್ನು ಸ್ವೀಕರಿಸಿ, ಸಂಗ್ರಹಿಸಿಟ್ಟುಕೊಂಡು ಸರಕಾರಕ್ಕೆ ಮೋಸ ಮಾಡಿ ಸಾಗಣೆ ಮಾಡುತ್ತಿದ್ದರು. ಈ ಮಾಹಿತಿಯನ್ನು ಕಲೆ ಹಾಕಿದ ಪೊಲೀಸರು ಅಂಗಡಿಯ ಮೇಲೆ ದಾಳಿ ನಡೆಸಿ ಪ್ರಮುಖ ಆರೋಪಿ ಹಾಗೂ ಅಂಗಡಿಯ ಮಾಲಕನಾಗಿರುವ ಧರ್ಮೇಂದರ್ ಸಹಿತ ಒಟ್ಟು 13 ಮಂದಿಯನ್ನು ಬಂಧಿಸಿದ್ದಾರೆ.

ಆರೋಪಿಗಳ ಬಳಿಯಿದ್ದ 1 ಕೋಟಿ ರೂ.ನಗದು, 16 ಮೊಬೈಲ್ ಪೋನ್‌ಗಳು, ಎರಡು ನೋಟು ಎಣಿಕೆ ಯಂತ್ರಗಳು, ಕೃತ್ಯಕ್ಕೆ ಬಳಕೆ ಮಾಡುತ್ತಿದ್ದ 24 ರಬ್ಬರ್ ಸೀಲುಗಳು, ಎರಡು ಕ್ಯಾಲ್ಕುಲೇಟರ್, ಒಂದು ಕಂಪ್ಯೂಟರ್ ಹಾಗೂ ಇತರೆ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ಧರ್ಮೇಂದರ್ ಮತ್ತೊಬ್ಬ ಆರೋಪಿ ಚಂಪಾಲಾಲ್‌ನನ್ನು ನೇಮಿಸಿಕೊಂಡು ಕೃತ್ಯ ಎಸಗುತ್ತಿದ್ದನು. ಉಳಿದ ಆರೋಪಿಗಳು ನೇರವಾಗಿ ಹಾಗೂ ತಮ್ಮ ಮಾಲಕರ ಸೂಚನೆ ಮೇರೆಗೆ ಹಣವನ್ನು ಬೇರೆಡೆಗೆ ಸಾಗಿಸುತ್ತಿದ್ದರು.

ಪ್ರಮುಖ ಆರೋಪಿ ಧರ್ಮೇಂದರ್ ಚಿನ್ನದ ವ್ಯಾಪಾರಿಯೆಂದು ಹೇಳಿಕೊಂಡು ಹವಾಲಾ ದಂಧೆ ನಡೆಸುತ್ತಿದ್ದನು. ಅಲ್ಲದೆ, ಸ್ಥಳಕ್ಕೆ ಅನುಗುಣವಾಗಿ ಕನಿಷ್ಠ 300 ರೂ. ಹಾಗೂ ಗರಿಷ್ಠ 400 ರೂ. ಹಣ ಪಡೆಯುತ್ತಿದ್ದ. ಈ ಮೊಕದ್ದಮೆಯನ್ನು ದಾಖಲಿಸಿಕೊಂಡಿರುವ ಹಲಸೂರು ಗೇಟ್ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News