×
Ad

ಕಿಸಾನ್ ಆನ್‌ಲೈನ್ ಮಾರುಕಟ್ಟೆಗೆ ಚಾಲನೆ

Update: 2016-01-11 23:35 IST

ಬೆಂಗಳೂರು, ಜ.11: ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆಯು ರೈತರು ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿಕೊಂಡು, ತಮ್ಮ ಬೆಳೆಗಳಿಗೆ ಉತ್ತಮ ಬೆಲೆಯನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್‌ಗುಂಡೂರಾವ್ ತಿಳಿಸಿದ್ದಾರೆ.
ಸೋಮವಾರ ನಗರದ ಖಾಸಗಿ ಹೊಟೇಲ್ ಒಂದರಲ್ಲಿ ‘ಕಿಸಾನ್‌ಮಾರುಕಟ್ಟೆ’ (ಜಿಚ್ಞಞಚ್ಟಛಿಠಿ.್ಚಟಞ) ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆ ಜಾರಿಯಿಂದ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆಯಾಗಲಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ ಎಂದರು.
ಎಪಿಎಂಸಿ ಮೂಲಕ ಈ ಮಾರುಕಟ್ಟೆ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಬೀದರ್‌ನಿಂದ ಚಾಮರಾಜನಗರದವರೆಗೆ ಯಾರು ಎಲ್ಲಿ ಬೇಕಾದರೂ ತಮ್ಮ ಕೃಷಿ ಉತ್ಪನ್ನಗಳನ್ನು ಬಿಡ್ ಮಾಡಬಹುದು. ಹಣಕಾಸಿನ ವ್ಯವಹಾರ ಪಾರದರ್ಶಕವಾಗಿ ನಡೆಯುತ್ತದೆ. ಇದರಿಂದಾಗಿ, ರೈತರಿಗೆ ಯಾವುದೇ ರೀತಿಯ ಮೋಸ, ವಂಚನೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ದಿನೇಶ್ ಹೇಳಿದರು.
ರೈತರಿಗೆ ತಂತ್ರಜ್ಞಾನ ಬಳಕೆಯ ಕುರಿತು ಹೆಚ್ಚಿನ ಮಾಹಿತಿ ಇರುವುದಿಲ್ಲ. ಆದುದರಿಂದ, ಅವರನ್ನು ವಂಚನೆ ಮಾಡುವ ಸಾಧ್ಯತೆ ಇರುತ್ತದೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾಲ್‌ಸೆಂಟರ್‌ಗಳನ್ನು ಆರಂಭಿಸಲಾಗಿದೆ. ರೈತರು ತಾವು ಬೆಳೆಯುವ ಉತ್ಪನ್ನಗಳ ಬೆಲೆಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡುವ ಮೂಲಕ ನೋಂದಾಯಿಸಿಕೊಳ್ಳಬಹುದು ಎಂದು ದಿನೇಶ್‌ಗುಂಡೂರಾವ್ ತಿಳಿಸಿದರು.
ಕಿಸಾನ್ ಮಾರುಕಟ್ಟೆ ವ್ಯವಸ್ಥೆಯ ಮುಖ್ಯಸ್ಥ ತ್ಯಾಗರಾಜು ರಾಳಪಲ್ಲಿ ಮಾತನಾಡಿ, ಸಾಮಾಜಿಕ ಬದ್ಧತೆಯ ದೃಷ್ಟಿಯಿಂದ, ದೇಶದ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ ಈ ವೆಬ್‌ಸೈಟ್ ಆರಂಭಿಸಲಾಗಿದೆಯೇ ಹೊರತು, ಇದರಲ್ಲಿ ಯಾವುದೇ ಲಾಭದ ಉದ್ದೇಶವಿಲ್ಲ ಎಂದರು.
ರೈತರು ಈ ಆನ್‌ಲೈನ್ ಮಾರುಕಟ್ಟೆಯಲ್ಲಿ ಸದಸ್ಯರಾಗಲು ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಉಚಿತವಾಗಿ ಸದಸ್ಯತ್ವ ಪಡೆದುಕೊಂಡು ತಾವು ಬೆಳೆದಂತಹ ಬೆಳೆಗಳನ್ನು ನ್ಯಾಯಯುತವಾದ ಬೆಲೆಗೆ ಮಾರಾಟ ಮಾಡಬಹುದಾಗಿದೆ ಎಂದು ಅವರು ಹೇಳಿದರು.
ಹೂ, ಹಣ್ಣು, ಧಾನ್ಯ, ಮಸಾಲೆ ಪದಾರ್ಥಗಳು, ಕುರಿ, ಮೀನು, ಕೋಳಿ, ಗೊಬ್ಬರ, ವ್ಯವಸಾಯಕ್ಕೆ ಬಳಸುವ ಉಪಕರಣಗಳನ್ನು ಈ ಆನ್‌ಲೈನ್ ವ್ಯವಸ್ಥೆಯ ಮೂಲಕ ಮಾರಾಟ ಮಾಡಬಹುದು ಎಂದು ತ್ಯಾಗರಾಜು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಮುಖ್ಯ ಸಚೇತಕ ಆರ್.ವಿ.ವೆಂಕಟೇಶ್, ಮಾಜಿ ಮೇಯರ್ ವೆಂಕಟೇಶ್‌ಮೂರ್ತಿ, ಕಿಸಾನ್ ಮಾರುಕಟ್ಟೆಯ ಸಹ ಮುಖ್ಯಸ್ಥ ಆರ್.ಸುರೇಶ್‌ಕುಮಾರ್, ಮುಖಂಡರಾದ ಮೋಹನ್‌ಕುಮಾರ್, ಅಮರ್‌ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News