ಲೋಕಾಯುಕ್ತ ನೇಮಕ ವಿಚಾರ; ನ್ಯಾ.ವಿಕ್ರಮ್‌ಜೀತ್ ಸೇನ್‌ರಿಂದ ಪತ್ರ ಬಂದಿಲ್ಲ: ಜಯಚಂದ್ರ
ಬೆಂಗಳೂರು, ಜ.11: ಲೋಕಾಯುಕ್ತ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾ.ವಿಕ್ರಮ್‌ಜೀತ್ ಸೇನ್ ರಾಜ್ಯ ಸರಕಾರಕ್ಕೆ ಯಾವುದೆ ಪತ್ರವನ್ನು ಬರೆದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಸೋಮವಾರ ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಅವರ 50ನೆ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಜಯಚಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು.
ಲೋಕಾಯುಕ್ತ ಹುದ್ದೆ ನಿರಾಕರಿಸಿ ನ್ಯಾ.ವಿಕ್ರಮ್‌ಜೀತ್ ಸೇನ್ ಪತ್ರ ಬರೆದಿದ್ದರೆ ಅದು ಕಾನೂನು ಇಲಾಖೆಗೆ ಬರಬೇಕು. ಆದರೆ, ಈವರೆಗೆ ಅಂತಹ ಯಾವುದೆ ಪತ್ರ ನಮಗೆ ಬಂದಿಲ್ಲ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಲೋಕಾಯುಕ್ತ ನೇಮಕಾತಿ ಸಲಹಾ ಸಮಿತಿಯ ಸಭೆಯಲ್ಲಿ ನ್ಯಾ.ವಿಕ್ರಮ್‌ಜೀತ್ ಸೇನ್ ಹಾಗೂ ನ್ಯಾ.ಎಸ್.ಆರ್.ನಾಯಕ್ ಹೆಸರು ಚರ್ಚೆಗೊಳಪಟ್ಟಿವೆ ಎಂದು ಅವರು ಹೇಳಿದರು.
ಇಬ್ಬರ ಪೈಕಿ ಒಬ್ಬರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸ್ಸು ಮಾಡುವ ಅಧಿಕಾರವನ್ನು ಸಮಿತಿಯು ಮುಖ್ಯಮಂತ್ರಿಗೆ ನೀಡಿದೆ. ಪ್ರಸ್ತುತ ಹೊಸದಿಲ್ಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ವಾಪಸ್ ಬಂದ ನಂತರ ಈ ಸಂಬಂಧ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಜಯಚಂದ್ರ ತಿಳಿಸಿದರು.
ಮುಖ್ಯಕಾರ್ಯದರ್ಶಿ ಗೈರು: ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಕೆ ಕುರಿತು ಇತ್ತೀಚೆಗೆ ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಸಂಸದೀಯ ಸಮಿತಿಯ ಸಭೆಗೆ ಮುಖ್ಯಕಾರ್ಯದರ್ಶಿ ಅರವಿಂದ ಜಾಧವ್ ಗೈರು ಹಾಜರಾಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದರು ದೂರು ನೀಡಿದ್ದಾರೆ. ಈ ಬಗ್ಗೆ ಅವರಿಂದ ವಿವರಣೆ ಪಡೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದರು. ಆಹಾರ ಸ್ವಾವಲಂಬನೆಯ ಕೊಡುಗೆ: ದೇಶದ ಎರಡನೆ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ದೇಶ ಕಂಡ ದೂರದೃಷ್ಟಿಯ ಅಪ್ರತಿಮ ನಾಯಕ. ಜೈಜವಾನ್, ಜೈಕಿಸಾನ್ ಎಂಬ ಘೋಷವ್ಯಾಕದ ಮೂಲಕ ದೇಶವು ಆಹಾರ ಸ್ವಾವಲಂಬನೆ ಹಾಗೂ ರಕ್ಷಣಾ ಇಲಾಖೆಯಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ ಎಂದು ಜಯಚಂದ್ರ ಸ್ಮರಿಸಿಕೊಂಡರು.
ಸರಳ, ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ತತ್ವಾದರ್ಶಗಳು ಎಲ್ಲ ರಾಜಕಾರಣಿಗಳಿಗೆ ಅನುಕರಣೀಯವಾದದ್ದು ಎಂದು ಅವರು ಅಭಿಪ್ರಾಯಪಟ್ಟರು.