ಕೆಎಟಿಯಲ್ಲಿ ಖಾಲಿ ಹುದ್ದೆ ಭರ್ತಿ; ಕೇಂದ್ರ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

Update: 2016-01-11 18:19 GMT

ಬೆಂಗಳೂರು, ಜ.11: ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣ(ಕೆಎಟಿ)ದಲ್ಲಿ ಖಾಲಿಯಿರುವ ನ್ಯಾಯಾಧೀಶ ಸದಸ್ಯರ ಹುದ್ದೆಗಳನ್ನು ನಾಲ್ಕು ತಿಂಗಳಲ್ಲಿ ಭರ್ತಿ ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
   ಕೆಎಟಿಯಲ್ಲಿ ನ್ಯಾಯಾಧೀಶರ ಕೊರತೆಯಿದ್ದು, ಭರ್ತಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ವಕೀಲರಾದ ಕೆ.ಸತೀಶ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮಖರ್ಜಿ ಮತ್ತು ನ್ಯಾ.ರವಿ ಮಳಿಮಠ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿ ಅರ್ಜಿ ಇತ್ಯರ್ಥಪಡಿಸಿತು.
ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರಕಾರದ ಪರವಾಗಿ ಸಹಾಯಕ ಸಾಲಿಸಿಟರ್ ಜನರಲ್ ಕೃಷ್ಣ ದೀಕ್ಷಿತ್ ಅವರು ಪ್ರಮಾಣಪತ್ರ ಸಲ್ಲಿಸಿ ‘ಕೆಎಟಿ ಮುಖ್ಯಸ್ಥರ ಹುದ್ದೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಭಕ್ತವತ್ಸಲ ಅವರನ್ನು ಕಳೆದ ಡಿ.15ರಂದು ನೇಮಿಸಲಾಗಿದೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಅರ್ಜಿದಾರರ ಪರ ವಕೀಲ ಎಂ.ಎಸ್.ಭಾಗವತ್ ವಾದಿಸಿ, ಮುಖ್ಯಸ್ಥರನ್ನು ನೇಮಕ ಮಾಡಿರಬಹುದು. ಆದರೆ, ಕೆಎಟಿಯಲ್ಲಿ ಇನ್ನೂ ನಾಲ್ಕು ಆಡಳಿತಾತ್ಮಕ ಸದಸ್ಯರ ಮತ್ತು ಮೂರು ನ್ಯಾಯಾಂಗ ಸದಸ್ಯರ ಹುದ್ದೆಗಳು ಖಾಲಿಯಿವೆ ಎಂದು ಪೀಠದ ಗಮನಕ್ಕೆ ತಂದರು. ಇದನ್ನು ಪರಿಗಣಿಸಿದ ಪೀಠವು ನಾಲ್ಕು ತಿಂಗಳಲ್ಲಿ ಕೆಎಟಿಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಸೂಚಿಸಿ ಅರ್ಜಿ ಇತ್ಯರ್ಥಪಡಿಸಿದರು. ಅಲ್ಲದೆ, ಹುದ್ದೆಗಳನ್ನು ಭರ್ತಿ ಮಾಡಲು ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೆ ಯಾವುದೆ ಕಾರಣಕ್ಕೂ ಕಾಲಹರಣ ಮಾಡಬಾರದು ಎಂದು ಕೇಂದ್ರ ಸರಕಾರಕ್ಕೆ ಮೌಖಿಕವಾಗಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳು ಸೂಚಿಸಿದರು.
ಜಾಫರ್ ನೇಮಕ ಹಿಂಪಡೆದ ಹೈಕೋರ್ಟ್:   ಲೋಕಾಯುಕ್ತ ರಿಜಿಸ್ಟ್ರಾರ್ ಹುದ್ದೆಗೆ ಐಎಎಸ್ ಅಧಿಕಾರಿ ಡಾ.ಪಿ.ಸಿ.ಜಾಫರ್ ನೇಮಕ ಮಾಡಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಹಿಂಪಡೆದಿದೆ. ರಿಜಿಸ್ಟ್ರಾರ್ ಹುದ್ದೆಗೆ ಡಾ.ಪಿ.ಸಿ.ಜಾಫರ್ ಅವರನ್ನು ನೇಮಿಸಿದ್ದ ಸರಕಾರದ ಕ್ರಮ ಪ್ರಶ್ನಿಸಿ ವಕೀಲ ಆನಂದಮೂರ್ತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ರಾಜ್ಯ ಅಡ್ವೋಕೇಟ್ ಜನರಲ್ ಮಧುಸೂದನ್ ಅವರು ಪ್ರಮಾಣಪತ್ರ ಸಲ್ಲಿಸಿ, ಜಾಫರ್ ಅವರ ನೇಮಕವನ್ನು ಹಿಂಪಡೆಯಲಾಗಿದೆ. ಲೋಕಾಯುಕ್ತ ಹಾಗೂ ಹೈಕೋರ್ಟ್ ನಡುವೆ ಚರ್ಚಿಸಿ ಲೋಕಾಯುಕ್ತ ರಿಜಿಸ್ಟ್ರಾರ್ ಹುದ್ದೆಗೆ ಜಿಲ್ಲಾ ನ್ಯಾಯಾಧೀಶರ ಶ್ರೇಣಿಯ ಅರ್ಹ ವ್ಯಕ್ತಿಯೊಬ್ಬರನ್ನು ನೇಮಕ ಮಾಡಲಾಗುವುದು ಎಂದು ವಿವರಿಸಿದರು.
 
ಈ ಪ್ರಮಾಣಪತ್ರಕ್ಕೆ ಒಪ್ಪಿದ ಹಂಗಾಮಿ ಮುಖ್ಯ ನ್ಯಾ.ಎಸ್.ಕೆ.ಮುಖರ್ಜಿ ಮತ್ತು ನ್ಯಾ.ರವಿ ಮಳೀಮಠ ಅವರಿದ್ದ ವಿಭಾಗೀಯ ಪೀಠ ಅರ್ಜಿ ಇತ್ಯರ್ಥಪಡಿಸಿತು. ಸರಕಾರದ ನೀಡಿದ ಪ್ರಕಾರ ಲೋಕಾಯುಕ್ತರಿಗೆ ಹೊಸ ರಿಜಿಸ್ಟ್ರಾರ್ ನೇಮಕವಾಗಬೇಕಾದರೆ ಮೊದಲು ಲೋಕಾಯುಕ್ತರು ನೇಮಕವಾಗಬೇಕು. ಲೋಕಾಯುಕ್ತ ನೇಮಕವಾದ ಬಳಿಕ ಅವರು ಹಾಗೂ ಹೈಕೋರ್ಟ್‌ಯೊಂದಿಗೆ ಚರ್ಚಿಸಿ ರಿಜಿಸ್ಟ್ರಾರ್ ಅವರನ್ನು ನೇಮಕ ಮಾಡಲಾಗುತ್ತದೆ. ಅಲ್ಲಿಯವರೆಗೆ ಲೋಕಾಯುಕ್ತಕ್ಕೆ ಕಾಯಂ ರಿಜಿಸ್ಟ್ರಾರ್ ನೇಮಕವಾಗುವುದಿಲ್ಲ. ಲೋಕಾಯುಕ್ತ ರಿಜಿಸ್ಟ್ರಾರ್ ಹುದ್ದೆಗೆ ಐಎಎಸ್ ಅಧಿಕಾರಿ ಡಾ.ಪಿ.ಸಿ.ಜಾಫರ್ ನೇಮಿಸಿದ್ದ ಸರಕಾರದ ಆದೇಶಕ್ಕೆ ನ್ಯಾಯಪೀಠ ಈ ಹಿಂದೆ ತಡೆಯಾಜ್ಞೆ ನೀಡಿತ್ತು. ಹೀಗಾಗಿ, ಎಂ.ಎಸ್.ಬಾಲಕೃಷ್ಣ ಎಂಬುವರು ಲೋಕಾಯುಕ್ತ ಹಂಗಾಮಿ ರಿಜಿಸ್ಟ್ರಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News