×
Ad

ಮೂರು ಸಾವಿರ ಮಠದಿಂದ ಅಕ್ರಮ ವಾಣಿಜ್ಯ ಸಂಕೀರ್ಣ; ಪಾಲಿಕೆ, ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2016-01-12 22:31 IST

ಬೆಂಗಳೂರು, ಜ.12: ಆಟದ ಮೈದಾನಕ್ಕಾಗಿ ಗುತ್ತಿಗೆ ನೀಡಿದ್ದ ಜಾಗದಲ್ಲಿ ಮೂರು ಸಾವಿರ ಮಠದಿಂದ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಿರುವ ಸಂಬಂಧ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
  ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಟದ ಮೈದಾನಕ್ಕಾಗಿ ಗುತ್ತಿಗೆ ನೀಡಿದ್ದ ಜಾಗದಲ್ಲಿ ಮೂರು ಸಾವಿರ ಮಠ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿರುವುದನ್ನು ಪ್ರಶ್ನಿಸಿ ಸ್ಥಳೀಯ ನಿವಾಸಿಗಳಾದ ರಮೇಶ್ ಅಂಬಸ ಶಲಗಾರ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾ.ರವಿ ಮಳೀಮಠ ಅವರಿದ್ದ ವಿಭಾಗೀಯ ನ್ಯಾಯಪೀಠ ನೋಟಿಸ್ ಜಾರಿ ಮಾಡಿತು.
   ಆಟದ ಮೈದಾನಕ್ಕೆ ನೀಡಿದ್ದ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿರುವ ಕುರಿತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೂ ನೋಟಿಸ್ ಜಾರಿ ಮಾಡಿ ಗುತ್ತಿಗೆ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕೆ ಮಂಜೂರಾತಿಯನ್ನು ರದ್ದುಪಡಿಸಿ ಜಾಗ ವಶಕ್ಕೆ ಪಡೆಯುವಂತೆ ಮೌಖಿಕವಾಗಿ ಸೂಚಿಸಿತು.
 ಮೂರು ಸಾವಿರ ಮಠದ ಕ್ರಮದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಆಟದ ಮೈದಾನಕ್ಕೆ ನೀಡಿದ್ದ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿರುವುದು ತೀವ್ರ ಮುಜುಗರದ ಸಂಗತಿ ಎಂದು ತಿಳಿಸಿತು.
99 ವರ್ಷ ಗುತ್ತಿಗೆ ನೀಡಲಾಗಿದೆ:  ಸರಕಾರಿ ಜಮೀನನ್ನು ಹೇಗೆ 99 ವರ್ಷಕ್ಕೆ ಗುತ್ತಿಗೆ ನೀಡಲಾಗುತ್ತದೆ. 99 ವರ್ಷ ದೀರ್ಘ ಅವಧಿಯಾಗಿದೆ. ವಾರ್ಷಿಕ 120 ರೂ.ಗೆ ಸರಕಾರ ಗುತ್ತಿಗೆ ನೀಡುತ್ತದೆ. ಆದರೆ, ಗುತ್ತಿಗೆ ಪಡೆದವರು ಮಳಿಗೆಗಳನ್ನು ಬಾಡಿಗೆಗೆ ನೀಡಿ ಲಕ್ಷಾಂತರ ರೂ. ಪಡೆಯುತ್ತಾರೆ ಎಂದು ಪೀಠ ಆಕ್ರೋಶ ವ್ಯಕ್ತಪಡಿಸಿತು.

ಪ್ರಕರಣದ ಹಿನ್ನೆಲೆ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ವ್ಯಾಪ್ತಿಯಲ್ಲಿ 1 ಎಕರೆ 5 ಗುಂಟೆ ಜಾಗವನ್ನು ಆಟದ ಮೈದಾನಕ್ಕಾಗಿ ಬಳಸಲು 1964ರ ಆ.20ರಂದು 99 ವರ್ಷಗಳ ಅವಧಿಗೆ ಮೂರು ಸಾವಿರ ಮಠಕ್ಕೆ ಗುತ್ತಿಗೆ ನೀಡಲಾಗಿತ್ತು. ಪ್ರತಿ ವರ್ಷ 120 ರೂ. ಬಾಡಿಗೆ ನಿಗದಿಪಡಿಸಲಾಗಿತ್ತು. ಆದರೆ, ಈ ಜಾಗವನ್ನು ಬೇರೆ ಕೆಲಸಗಳಿಗೆ ಬಳಕೆ ಮಾಡಬಾರದು ಎಂದು ಗುತ್ತಿಗೆ ಷರತ್ತು ವಿಧಿಸಲಾಗಿತ್ತು. ಆದರೆ, ಆಟದ ಮೈದಾನದಲ್ಲಿ 35 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಆ ಮೂಲಕ ಗುತ್ತಿಗೆ ಷರತ್ತು ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರು ದೂರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News