×
Ad

ಅಮರಾವತಿ ಮಾದರಿಯಲ್ಲಿ ‘ಗ್ರೇಟರ್ ಬೆಂಗಳೂರು’: ಕೆ.ಜೆ.ಜಾರ್ಜ್

Update: 2016-01-12 22:32 IST

ಬೆಂಗಳೂರು, ಜ.12: ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿ ಮಾದರಿ ಯಲ್ಲಿ ‘ಗ್ರೇಟರ್ ಬೆಂಗಳೂರು’ ನಿರ್ಮಾಣ ಮಾಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿ ಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಸಮೀಪ ಸುಮಾರು 10 ಸಾವಿರ ಎಕರೆ ಪ್ರದೇಶದಲ್ಲಿ ‘ಗ್ರೇಟರ್ ಬೆಂಗಳೂರು’ ನಿರ್ಮಾಣ ಮಾಡುವ ಆಲೋಚನೆಯಿದೆ. ಈ ಸಂಬಂಧ ವಿವರವಾದ ವರದಿ ನೀಡುವಂತೆ ಬಿಎಂಆರ್‌ಡಿಎಗೆ ಸೂಚನೆ ನೀಡಲಾಗಿದೆ ಎಂದರು.
ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ 11 ಸಾವಿರ ಕೋಟಿ ರೂ.ಗಳ ಅಗತ್ಯವಿದೆ. ಭೂ ಸ್ವಾಧೀನ ಪ್ರಕ್ರಿಯೆಗೆ ಸುಮಾರು 8 ಸಾವಿರ ಕೋಟಿ ರೂ.ಬೇಕಾಗುತ್ತವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸೋಮವಾರ ಕೇಂದ್ರ ಸಚಿವ ನಿತಿನ್ ಗಡ್ಕರಿಯನ್ನು ಭೇಟಿ ಮಾಡಿ ಫೆರಿಫೆರಲ್ ರಿಂಗ್ ರಸ್ತೆಗೆ ಕೇಂದ್ರದ ನೆರವನ್ನು ಕೋರಲಾಗಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಜಾರ್ಜ್ ತಿಳಿಸಿದರು.
ಎಲಿವೇಟೆಡ್ ಕಾರಿಡಾರ್: ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು 18,500 ಕೋಟಿ ರೂ.ವೆಚ್ಚ ದಲ್ಲಿ ಎಲಿವೇಟೆಡ್ ಕಾರಿಡಾರ್‌ಗಳನ್ನು ನಿರ್ಮಿಸಲಾಗುವುದು. ಉತ್ತರ-ದಕ್ಷಿಣ ಕಾರಿಡಾರ್(ಕೇಂದ್ರೀಯ ಸಿಲ್ಕ್ ಬೋರ್ಡ್- ಹೆಬ್ಬಾಳ) 18.1 ಕಿ.ಮೀ., ಪೂರ್ವ- ಪಶ್ಚಿಮ ಕಾರಿಡಾರ್-1 (ಕೆ.ಆರ್.ಪುರ- ಗುರುಗುಂಟೆಪಾಳ್ಯ) 19.70 ಕಿ.ಮೀ., ಪೂರ್ವ-ಪಶ್ಚಿಮ ಕಾರಿಡಾರ್-2 (ಜ್ಞಾನಭಾರತಿ-ವರ್ತೂರು ಕೋಡಿ) 27.70 ಕಿ.ಮೀ. ವಿಸ್ತೀರ್ಣ ಹೊಂದಿರಲಿದೆ ಎಂದು ಅವರು ಹೇಳಿದರು.
ಸಂಪರ್ಕ ಕಾರಿಡಾರ್: ಉತ್ತರ-ದಕ್ಷಿಣ ಹಾಗೂ ಪೂರ್ವ-ಪಶ್ಚಿಮ ಕಾರಿಡಾರ್ 2ಕ್ಕೆ ಸಂಪರ್ಕ ಕಲ್ಪಿಸಲು ಅಗರದಿಂದ ಕಲಾಸಿಪಾಳ್ಯದವರೆಗೆ(9.20 ಕಿ.ಮೀ.), ಪೂರ್ವ-ಪಶ್ಚಿಮ ಕಾರಿಡಾರ್ 1 ಹಾಗೂ ಪೂರ್ವ-ಪಶ್ಚಿಮ ಕಾರಿಡಾರ್ 2ಕ್ಕೆ ಸಂಪರ್ಕ ಕಲ್ಪಿಸಲು ರಿಚ್ಮಂಡ್ ರಸ್ತೆಯಿಂದ ಹಲಸೂರುವರೆಗೆ(2.30 ಕಿ.ಮೀ.), ಹೊರ ವರ್ತುಲ ರಸ್ತೆಯಲ್ಲಿರುವ ಕಲ್ಯಾಣ ನಗರ ಜಂಕ್ಷನ್‌ಯಿಂದ ಸೆಂಟ್ ಜಾನ್ಸ್ ಚರ್ಚ್ ರಸ್ತೆ ಹಾಗೂ ವ್ಹೀಲರ್ಸ್‌ ರಸ್ತೆ ಜಂಕ್ಷನ್(5.70 ಕಿ.ಮೀ.)ವರೆಗೆ ಸಂಪರ್ಕ ಕಾರಿಡಾರ್ ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಜಾರ್ಜ್ ಮಾಹಿತಿ ನೀಡಿದರು.
 ಬಿಎಂಆರ್‌ಡಿಎ ವ್ಯಾಪ್ತಿಯಲ್ಲಿನ ಉಪ ನಗರಗಳನ್ನು ಸಂಪರ್ಕ ಕಲ್ಪಿಸುವ 380 ಕಿ.ಮೀ. ಹೊರವರ್ತುಲ ರಸ್ತೆ(ಎಸ್‌ಟಿಆರ್‌ಆರ್) ನಿರ್ಮಾಣಕ್ಕೂ ಉದ್ದೇಶಿಸಲಾಗಿದೆ. ಈ ಹಿಂದೆ 2007ರಲ್ಲಿ ಡಿಎಲ್‌ಎಫ್ ಮೂಲಕ ಈ ಯೋಜನೆ ಕೈಗೆತ್ತಿಕೊಳ್ಳಲು ಪ್ರಯತ್ನ ಮಾಡಲಾಗಿತ್ತು. ನನೆಗುದಿಗೆ ಬಿದ್ದಿದ್ದ ಯೋಜನೆಯನ್ನು ಪುನಃ ಚಾಲನೆ ನೀಡಲಾಗುತ್ತಿದೆ ಎಂದು ಜಾರ್ಜ್ ಹೇಳಿದರು.
ಗರದಲ್ಲಿನ ಕೆರೆಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಅಂತರ್ಜಲ ಮಟ್ಟವನ್ನು ವೃದ್ಧಿಸಲು ಸರಕಾರಿ ಸಂಸ್ಥೆಗಳು, ರಕ್ಷಣಾ ಇಲಾಖೆ, ಶಾಲಾ, ಕಾಲೇಜುಗಳಿಗೆ ಸೇರಿದ ಪ್ರದೇಶದಲ್ಲಿ ಮೊದಲ ಹಂತದಲ್ಲಿ ಮಳೆ ಕೊಯ್ಲು ಪದ್ಧತಿಯನ್ನು ಸಂಪೂರ್ಣವಾಗಿ ಅಳವಡಿಸಲು ಜಾಗೃತಿ ಮೂಡಿಸ ಲಾಗುವುದು ಎಂದು ಅವರು ತಿಳಿಸಿದರು.
ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿರುವ ಜರ್ಮನಿ ಮೂಲದ ಸಂಸ್ಥೆ ಇನ್ನು 10 ದಿನಗಳಲ್ಲಿ ನಮಗೆ ವರದಿ ನೀಡಲಿದೆ. ನಗರದಲ್ಲಿ 1,400 ಎಂಎಲ್‌ಡಿ ತ್ಯಾಜ್ಯ ನೀರು ಉತ್ಪತ್ತಿಯಾಗುತ್ತಿದ್ದು, 721 ಎಂಎಲ್‌ಡಿ ಮಾತ್ರ ಶುದ್ಧೀಕರಿಸುವ ಸಾಮರ್ಥ್ಯದ ಘಟಕಗಳು ಇವೆ. 339 ಎಂಎಲ್‌ಡಿಯ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನು 520 ಎಂಎಲ್‌ಡಿ ಸಾಮರ್ಥ್ಯದ ಘಟಕಗಳನ್ನು ನಿರ್ಮಿಸುವ ಉದ್ದೇಶವಿದೆ ಎಂದು ಜಾರ್ಜ್ ಹೇಳಿದರು.
ಸಭೆಯಲ್ಲಿ ಮೇಯರ್ ಬಿ.ಎನ್.ಮಂಜುನಾಥರೆಡ್ಡಿ, ಉಪಮೇಯರ್ ಹೇಮಲತಾ, ಬೆಂಗಳೂರು ಜಲಮಂಡಳಿ ಅಧ್ಯಕ್ಷ ವಿಜಯಭಾಸ್ಕರ್, ಬೆಂಗಳೂರು ಜಿಲ್ಲಾಧಿಕಾರಿ ಶಂಕರ್, ಬಿಬಿಎಂಪಿ ಆಯುಕ್ತ ಜಿ.ಕುಮಾರನಾಯ್ಕಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News