ಜೀವ ರಕ್ಷಣೆಗೆ ಹೆಲ್ಮೆಟ್ ಕಡ್ಡಾಯ: ಡಾ.ಸಲೀಂ
ಬೆಂಗಳೂರು, ಜ.12: ದ್ವಿಚಕ್ರ ವಾಹನದ ಹಿಂಬದಿ ಸವಾರರೂ ಹೆಲ್ಮೆಟ್ ಕಡ್ಡಾಯವಾಗಿ ಧರಿಸುವ ಮೂಲಕ ತಮ್ಮ ಜೀವದ ರಕ್ಷಣೆಗೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ಸಂಚಾರಿ ವಿಭಾಗದ ಹೆಚ್ಚುವರಿ ಆಯುಕ್ತ ಡಾ.ಸಲೀಂ ತಿಳಿಸಿದ್ದಾರೆ.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಸಂಭವಿಸುತ್ತಿರುವ ಹೆಚ್ಚಿನ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವುದು ದ್ವಿಚಕ್ರ ವಾಹನದ ಹಿಂಬದಿ ಸವಾರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದರು.
ಭಾರತದಲ್ಲಿ 4ಲಕ್ಷ ರಸ್ತೆ ಅಪಘಾತಗಳು ಪ್ರತಿವರ್ಷ ಸಂಭ ವಿಸುತ್ತವೆ. ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ 2020ಕ್ಕೆ ರಸ್ತೆ ಅಪಘಾತಗಳು ಪ್ರಮುಖ ಆತಂಕ ಹುಟ್ಟಿಸುವ ವಿಷಯವಾಗಿದ್ದು, ಪ್ರತಿ 1000 ವಾಹನಗಳಲ್ಲಿ 35 ಅಪಘಾತಕ್ಕೆ ಈಡಾಗುತ್ತಿವೆ. ಇದನ್ನು ತಡೆಗಟ್ಟಲು ಈಗಿನಿಂದಲೇ ಸುರಕ್ಷಿತ ಕ್ರಮಗಳನ್ನು ಅನುಸರಿಸುವುದು ಅಗತ್ಯವಿದೆ ಎಂದು ಅವರು ತಿಳಿಸಿದರು.
ಸಾಗರ್ ಆಸ್ಪತ್ರೆಯ ಖ್ಯಾತ ನ್ಯೂರೋಸರ್ಜನ್ ಡಾ.ಮಧುಸೂದನ್ ಮಾತನಾಡಿ, ದ್ವಿಚಕ್ರ ವಾಹನದ ಅಪಘಾತದಿಂದ ಉಂಟಾಗುವ ಮೆದುಳಿನ ಹಾನಿ ಶಾಶ್ವತ ಅಂಗವಿಕಲತೆಯನ್ನು ಉಂಟು ಮಾಡುತ್ತದೆ. ಹಾಗೂ ಕೈ ಕಾಲು ಕಳೆದುಕೊಂಡು ಜೀವನವಿಡೀ ಇನ್ನೊಬ್ಬರನ್ನು ಅವಲಂಬಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಹೀಗಾಗಿ ದ್ವಿಚಕ್ರ ಸವಾರರು ಜಾಗ್ರತೆ ವಹಿಸುವುದು ತೀರ ಅಗತ್ಯವೆಂದು ಅವರು ತಿಳಿಸಿದರು.
ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತವೆ. ತಲೆಯಲ್ಲಿ ಹೊಟ್ಟು ಬೆಳೆಯುತ್ತದೆ ಹಾಗೂ ಬೇಸಿಗೆಯಲ್ಲಿ ಹೆಲ್ಮೆಟ್ ಧರಿಸುವುದು ಕಷ್ಟ ಎಂಬ ತಪ್ಪು ನಂಬಿಕೆಗಳಿವೆ. ಈ ಬಗ್ಗೆ ಜನತೆಯಲ್ಲಿ ತಿಳುವಳಿಕೆ ನೀಡುವ ಅಗತ್ಯವಿದ್ದು, ಇಂತಹ ತಪ್ಪು ತಿಳುವಳಿಕೆಗಳಿಗಿಂತ ಪ್ರಾಣಮುಖ್ಯ ಎಂಬುದನ್ನು ತಿಳಿಸುವ ಅಗತ್ಯವಿದೆ ಅವರು ತಿಳಿಸಿದರು.