×
Ad

ನಿಗಮ ಮಂಡಳಿಗಳಿಗೆ ನೇಮಕ; ಕಾರ್ಯಕರ್ತರಿಗೆ ಅಧಿಕಾರ ನೀಡುವಂತೆ ಶಾಸಕ ಸೋಮಶೇಖರ್ ಆಗ್ರಹ

Update: 2016-01-12 22:37 IST

ಬೆಂಗಳೂರು, ಜ.12: ರಾಜ್ಯ ಸರಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರ್ಣಗೊಂಡಿದ್ದರೂ ಇನ್ನೂ ತಳಮಟ್ಟದ ಕಾರ್ಯಕರ್ತರಿಗೆ ಅಧಿಕಾರ ಮರೀಚಿಕೆಯಾಗಿದೆ. ಆದುದರಿಂದ, ಶೀಘ್ರವೇ ನಿಗಮ, ಮಂಡಳಿಗಳಿಗೆ ಸದಸ್ಯರು, ನಿರ್ದೇಶಕರನ್ನು ನೇಮಕ ಮಾಡುವಂತೆ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಶಾಸಕ ಎಸ್. ಟಿ.ಸೋಮಶೇಖರ್ ಆಗ್ರಹಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ಗೆ ಪತ್ರ ಬರೆದಿರುವ ಅವರು, ಕಳೆದ 9 ವರ್ಷಗಳಿಂದ ಅಧಿಕಾರದಿಂದ ದೂರವಿದ್ದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು 30 ತಿಂಗಳಾದರೂ ತಳಮಟ್ಟದ ಕಾರ್ಯಕರ್ತರಿಗೆ ಈವರೆಗೆ ಯಾವುದೇ ಅಧಿಕಾರ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳು ಎದುರಾಗಿದ್ದು, ನೂರಾರು ಕಾರ್ಯಕರ್ತರಿಗೆ ಸಣ್ಣ-ಪುಟ್ಟ ಅಧಿಕಾರ ದೊರೆತರೆ ಹೆಚ್ಚು ಉತ್ಸಾಹದಿಂದ ಕೆಲಸ ಮಾಡಿ ಪಕ್ಷ ಸಂಘಟನೆಗೆ ಪಂಚಾಯತ್ ಮಟ್ಟದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಿಗಮ, ಮಂಡಳಿಗಳಿಗೆ ಸದಸ್ಯರು, ನಿರ್ದೇಶಕರನ್ನು ಶೀಘ್ರವೇ ನೇಮಕ ಮಾಡಲಾಗುವುದು ಎಂದು ನೀವು ಹಲವಾರು ಬಾರಿ ಹೇಳಿದ್ದೀರಾ. ಆದರೆ, ಈವರೆಗೆ ನೇಮಕ ಪ್ರಕ್ರಿಯೆ ಆರಂಭವಾಗಿಲ್ಲ. ಯಾವುದೇ ಗೊಂದಲಗಳಿಲ್ಲದೆ ಎಲ್ಲ ನಿಗಮ ಮಂಡಳಿಗಳಿಗೂ ಅಧ್ಯಕ್ಷ- ಉಪಾಧ್ಯಕ್ಷರನ್ನು ನೇಮಕ ಮಾಡಿದ್ದು ಸಂತಸದ ವಿಷಯ. ಆದರೆ, ಸದಸ್ಯ, ನಿರ್ದೇಶಕರ ನೇಮಕಾತಿಯಲ್ಲಿ ವಿಳಂಬವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇದರಿಂದಾಗಿ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾ ವಣೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅನೇಕ ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 30 ತಿಂಗಳಾದರೂ ಕಾರ್ಯಕರ್ತರಿಗೆ ಯಾವುದೇ ಅಧಿಕಾರ ದೊರೆಯದಿರುವುದು ಅಸಮಾಧಾನ ಉಂಟು ಮಾಡಿದೆ ಎಂದು ಸೋಮಶೇಖರ್ ಹೇಳಿದ್ದಾರೆ.
ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ 13 ತಿಂಗಳಾಗಿವೆ. ಈವರೆಗೆ ಸದಸ್ಯರನ್ನು ನೇಮಿಸಿಲ್ಲ. ಕೂಡಲೇ ಸದಸ್ಯರನ್ನು ನೇಮಕ ಮಾಡಿದರೆ ಪಕ್ಷ ಬಲವರ್ಧನೆಗೆ ಹಾಗೂ ಚುನಾವಣೆಗಳಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಹಕಾರಿಯಾಗುತ್ತದೆ. ಆದುದರಿಂದ, ಆದಷ್ಟು ತ್ವರಿತವಾಗಿ ಕೆಪಿಸಿಸಿ ಕಾರ್ಯಕಾರಿಣಿಯ ಸಭೆ ಕರೆದು ಈ ವಿಚಾರದ ಬಗ್ಗೆ ಚರ್ಚೆ ನಡೆಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News