ಅಣೆಕಟ್ಟುಗಳ ಸುರಕ್ಷತೆಗೆ ಮುನ್ನೆಚ್ಚರಿಕೆ ಕ್ರಮ: ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು, ಜ.12: ರಾಜ್ಯದಲ್ಲಿ ಅಣೆಕಟ್ಟುಗಳ ಸುರಕ್ಷತೆಗೆ ಸರಕಾರ ಹೆಚ್ಚಿನ ಗಮನ ನೀಡಿದ್ದು, ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ರಾಜ್ಯದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ನಗರದಲ್ಲಿ ನಡೆದ ರಾಷ್ಟ್ರೀಯ ಅಣೆಕಟ್ಟುಗಳ ಸುರಕ್ಷತಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 8 ಬೃಹತ್ ಅಣೆಕಟ್ಟುಗಳು ಇವೆ. ಇಲ್ಲೆಲ್ಲಾ ಬಿಗಿಯಾದ ಸುರಕ್ಷತಾ ಕ್ರಮಗಳನ್ನು ಜಾರಿ ಮಾಡಲಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ತಂತ್ರಜ್ಞಾನಕ್ಕೆ ನೀರಾವರಿ ಇಲಾಖೆ ಆದ್ಯತೆ ನೀಡಿದ್ದು, ವಿಶ್ವಬ್ಯಾಂಕ್ ನೆರವಿನಡಿ ಈ ನೀರಾವರಿ ಯೋಜನೆಗಳ ಜಾರಿಗೆ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.
ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಗೋವಾ ಸರಕಾರದ ಜೊತೆ ಮಾತುಕತೆ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಲು ಗೋವಾ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಅವರಿಂದ ಇಲ್ಲಿಯವರೆಗೂ ಯಾವುದೇ ಉತ್ತರ ಬಂದಿಲ್ಲ. ಮತ್ತೊಮ್ಮೆ ಗೋವಾ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡುತ್ತೇವೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಕೇಂದ್ರದ ಜಲ ಆಯೋಗದ ಅಧ್ಯಕ್ಷ ಘನಶ್ಯಾಮ್ ಝಾ, ಕಷಿ ಹಾಗೂ ಆರ್ಥಿಕ ಅಭಿವೃದ್ಧಿಗೆ ಅಣೆಕಟ್ಟುಗಳು ಅತ್ಯಾವಶ್ಯಕ. ಅಣೆಕಟ್ಟುಗಳ ನಿರ್ಮಾಣ ಹಾಗೂ ನಿರ್ವಹಣೆ ಸವಾಲಿನ ಕಾರ್ಯವಾಗಿದ್ದು, ಅಣೆಕಟ್ಟುಗಳ ನಿರ್ಮಾಣದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಸಮಾರಂಭದಲ್ಲಿ ರಾಜ್ಯದ ಜಲಸಂಪನ್ಮೂಲ ಕಾರ್ಯದರ್ಶಿ ಗುರುಪಾದಪ್ಪಸ್ವಾಮಿ, ಮುಖ್ಯ ಎಂಜಿನಿಯರ್ ಮಹೇಶ್ ಎಂ. ಹಿರೇಮಠ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮೇಕೆದಾಟು ಯೋಜನೆಗೆ ಅಂತಿಮ ಸಿದ್ಧತೆ
ಮೇಕೆದಾಟು ಕುಡಿಯುವ ನೀರಿನ ಯೋಜನೆಯ ಸಿದ್ಧತೆ ಅಂತಿಮ ಹಂತ ತಲುಪಿದ್ದು, ಶೀಘ್ರವೇ ಈ ಯೋಜನೆಗೆ ಕೇಂದ್ರದ ಒಪ್ಪಿಗೆ ದೊರೆಯಲಿದೆ. ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ ಮತ್ತಿತರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆಗೆ ಅನುಮತಿ ದೊರೆತಿದ್ದು, ಕಾಮಗಾರಿ ಪ್ರಾರಂಭವಾಗಿದೆ. ಅರಣ್ಯ ಭಾಗದಲ್ಲಿ ಕಾಮಗಾರಿ ನಡೆಸಲು ಕೆಲವು ಷರತ್ತುಗಳಿದ್ದು, ಅವುಗಳನ್ನು ಪೂರೈಸಿದ ನಂತರ ಅಲ್ಲಿಯೂ ಕಾಮಗಾರಿಗೆ ಅನು ಮತಿ ದೊರೆಯಲಿದೆ ಎಂದು ಹೇಳಿದರು.
ಎಂ.ಬಿ.ಪಾಟೀಲ್, ಸಚಿವ ಜಲಸಂಪನ್ಮೂಲ