×
Ad

ಪೋಡಿ ಕಡತ ಮುಕ್ತ ಗ್ರಾಮ’ಕ್ಕಾಗಿ ಆಂದೋಲನ: ಮುನೀಶ್ ವೌದ್ಗಿಲ್

Update: 2016-01-12 22:39 IST

ಬೆಂಗಳೂರು, ಜ.12: ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಎಲ್ಲ ಗ್ರಾಮಗಳನ್ನು ‘ಪೋಡಿ ಕಡತ ಮುಕ್ತ ಗ್ರಾಮ’ ವನ್ನಾಗಿ ಮಾಡಲು ಆಂದೋಲನ ರೂಪಿಸಲಾಗಿದೆ ಎಂದು ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆ ಇಲಾಖೆಯ ಆಯುಕ್ತ ಮುನೀಶ್ ವೌದ್ಗಿಲ್ ತಿಳಿಸಿದ್ದಾರೆ.
ಮಂಗಳವಾರ ರಾಜ್ಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖಾ ಕಾರ್ಯನಿರ್ವಾಹಕ ನೌಕರರ ಸಂಘ ನಗರದ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ದಿನಚರಿ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 ಸದ್ಯ 840 ಗ್ರಾಮಗಳನ್ನು ಪೋಡಿ ಕಡತ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ. ಮುಂದಿನ ಐದು ವರ್ಷ ಗಳಲ್ಲಿ ಪ್ರತಿ ಗ್ರಾಮವನ್ನು ‘ಪೋಡಿ ಮುಕ್ತ ಗ್ರಾಮ’ವನ್ನಾಗಿ ಮಾಡಲು ಆಂದೋಲನ ರೂಪಿಸಲಾಗಿದೆ. ಇದನ್ನು ಅತಿ ಶೀಘ್ರವಾಗಿ ಮಾಡುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುವುದೆಂದು ಅವರು ತಿಳಿಸಿದರು.
ಭೂ ಮಾಪನ ನೌಕರರು ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. 5,300 ಕೆರೆಗಳ ಭೂ ವಿಸ್ತೀರ್ಣವನ್ನು ಕೇವಲ ಮೂರು ತಿಂಗಳಲ್ಲಿ ಸರ್ವೇ ಮಾಡಿ ಬಂದೋಬಸ್ತ್ ಮಾಡಿದ್ದಾರೆ. ಇದರಿಂದಾಗಿ ಭೂ ಮಾಪನ ಇಲಾಖೆಯ ಬಗ್ಗೆ ಜನತೆಗೆ ಒಳ್ಳೆಯ ಅಭಿಪ್ರಾಯ ಮೂಡಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.
ಎಡಿಎಲ್‌ಆರ್‌ಗಳ ನೇಮಕ: ತಾಲೂಕು ಹಂತದಲ್ಲಿ ಕಾರ್ಯನಿರ್ವಹಿಸುವಂತಹ ಭೂ ದಾಖಲೆಗಳ ಸಹಾಯಕ ನಿರ್ದೇಶಕರು(ಎಡಿಎಲ್‌ಆರ್) ಅಗತ್ಯವಿದ್ದು, ಈ ಬಗ್ಗೆ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರವಾಗಿಯೇ ನೇಮಿಸಿಕೊಳ್ಳಲಾಗುವುದು ಎಂದು ಮುನೀಶ್ ವೌದ್ಗಿಲ್ ತಿಳಿಸಿದರು.
  ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಬಿ. ಬಸವರಾಜು ಮಾತನಾಡಿ, ಭೂ ಮಾಪನ ಕಂದಾಯ ಇಲಾಖೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ರೈತಪರವಾಗಿ ಅತ್ಯಂತ ದಕ್ಷತೆಯಿಂದ ಕೆಲಸ ಕಾರ್ಯಗಳು ನಡೆಯುತ್ತಿವೆ. ಭೂ ಸರ್ವೇಗಳು ಪಾರದರ್ಶಕತೆಯಿಂದ ಕೂಡಿದ್ದು, ಇಲಾಖೆಗೆ ಸಂಬಂಧಿಸಿದ ದೂರುಗಳು ತೀರ ಕಡಿಮೆ ಇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News