×
Ad

ಜ.30: ನಗರದಲ್ಲಿ ‘ಸಹಬಾಳ್ವೆ ಸಾಗರ ’ ರಾಷ್ಟ್ರೀಯ ಸಮಾವೇಶ

Update: 2016-01-13 16:33 IST

 ಮಂಗಳೂರು,ಜ.13: ಮಹಾತ್ಮ ಗಾಂಧೀಜಿ ಹತ್ಯೆಯಾದ ಜ.30 ರಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯು ನಗರದ ಪುರಭವನದಲ್ಲಿ ‘ಸಹಬಾಳ್ವೆ ಸಾಗರ’ ಎಂಬ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಿದೆ ಎಂದು ಕರ್ನಾಟಕ ಕೋಮುಸೌಹಾರ್ದ ವೇದಿಕೆಯ ಕೇಂದ್ರ ಸಮಿತಿ ಪ್ರ.ಕಾರ್ಯದರ್ಶಿ ಕೆ.ಎಲ್.ಅಶೋಕ್ ಹೇಳಿದರು.

 ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮವನ್ನು ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದು ಸ್ವರಾಜ್ ಅಭಿಯಾನದ ರಾಷ್ಟ್ರೀಯ ಮುಖಂಡ ಯೋಗೇಂದ್ರ ಯಾದವ್ , ಮಾನವಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಸಾಹಿತಿ ಚಂದ್ರಶೇಖರ ಪಾಟೀಲ್, ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

      ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆ ತನಕ ನಿರಂತರವಾಗಿ ನಡೆಯುವ ಸಮಾವೇಶದಲ್ಲಿ ವೈವಿಧ್ಯಮಯ ಸಾಂಸ್ಕೃತಿ ಕಾರ್ಯಕ್ರಮ ನಡೆಯಲಿದೆ. ಪೇರೂರು ಜಾರು ವಿರಚಿತ ಮತ್ತು ನಿರ್ದೇಶನದ ಯಕ್ಷಗಾನ, ಹೆಗ್ಗೋಡು ಪ್ರಸನ್ನ ರಚಿಸಿ , ಸ್ಪಂದನ ಸಾಗರ ತಂಡ ಅಭಿನಯಿಸಿರುವ ‘ಕೊಂದವರಾರು’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. ವಚನ,ಸೂಫಿ, ಸೌಹಾರ್ದ ಗೀತೆಗಳು, ಕಂಗೀಲು ನೃತ್ಯ, ತುಳು, ಬ್ಯಾರಿ, ಕೊಂಕಣಿ ಸಂಸ್ಕೃತಿ ಮತ್ತು ಜನಪದ ಕಲಾ ಪ್ರಕಾರಗಳು ಹಾಗೂ ಕೋರಲ್ ಕಲಾ ತಂಡದಿಂದ ಡೋಲು ಕುಣಿತ ಮುಂತಾದ ಕರಾವಳಿ ಮತ್ತು ಕರ್ನಾಟಕದ ಕಲಾಪ್ರಕಾರಗಳ ವಿಶೇಷ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.

   ಸಮಾವೇಶದಲ್ಲಿ 15 ರಾಜ್ಯಗಳು ಮತ್ತು ನಾಡಿನ 30 ಜಿಲ್ಲೆಯ ಪ್ರತಿನಿಧಿಗಳು ಆಗಮಿಸಲಿದ್ದಾರೆ. ಕರಾವಳಿಯಲ್ಲಿ ಸಹಬಾಳ್ವೆ ಮತ್ತು ಅವೈದಿಕ ಪರಂಪರೆಯ ಪ್ರತಿನಿಧಿಗಳಾದ ನಾರಾಯಣಗುರು, ರಾಣಿ ಅಬ್ಬಕ್ಕ, ಸಿರಿ, ಬಪ್ಪ ಬ್ಯಾರಿ, ಕುದ್ಮುಲ್ ರಂಗರಾವ್ ಮುಂತಾದವರ ಹೆಸರಿನಲ್ಲಿ ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದವರು ತಿಳಿಸಿದರು.

   ಪತ್ರಿಕಾಗೋಷ್ಠಿಯಲ್ಲಿ ಸಹಬಾಳ್ವೆ ಸಾಗರ ರಾಷ್ಟ್ರೀಯ ಸಮಾವೇಶದ ಸ್ವಾಗತ ಸಮಿತಿ ಯ ಪ್ರ.ಕಾರ್ಯದರ್ಶಿ ಉಮರ್ ಯು.ಹೆಚ್, ಉಪಾಧ್ಯಕ್ಷ ವಾಲ್ಟರ್ ಮಾಬೆನ್, ಕಾರ್ಯದರ್ಶಿ ಗುಲಾಬಿ ಬಿಳಿಮಲೆ, ಕರ್ನಾಟಕ ಕೋಮುಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಕೆ.ಫಣಿರಾಜ್ ಉಪಸ್ಥಿತರಿದ್ದರು.

===================

         

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor