×
Ad

ಬಿಬಿಎಂಪಿ ಮಹಿಳಾ ಸದಸ್ಯರ ಮೇಲೆ ದೌರ್ಜನ್ಯ ಆರೋಪ; ಕಾಂಗ್ರೆಸ್ ಶಾಸಕರ ವಿರುದ್ಧ ಬಿಜೆಪಿ ಪ್ರತಿಭಟನೆ

Update: 2016-01-13 23:02 IST

ಬೆಂಗಳೂರು, ಜ. 13: ನಗರಪಾಲಿಕೆ ಮಹಿಳಾ ಕಾರ್ಪೊರೇಟರ್‌ಗಳ ಮೇಲೆ ಕಾಂಗ್ರೆಸ್ ಶಾಸಕ ಮುನಿರತ್ನ ಹಾಗೂ ಪಾಲಿಕೆ ಸದಸ್ಯ ಜಿ.ಕೆ. ವೆಂಕಟೇಶ್ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಬೀದಿಗಿಳಿದು ಪ್ರತಿಭಟನೆ ನಡೆಸಿತು.
ಬಿಬಿಎಂಪಿ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕರು ಹಾಗೂ ಪಾಲಿಕೆ ಸದಸ್ಯರು, ನಾಯಕರು ಪಾಲಿಕೆಯ ಮಹಿಳಾ ಸದಸ್ಯರಿಗೆ ಗೌರವ ನೀಡದೆ, ದೌರ್ಜನ್ಯ ನಡೆಸುತ್ತಿರುವ ಮುನಿರತ್ನರವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವರೂ ಆದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಪಡಿಸಿದರು.
 ಎರಡು ದಿನದೊಳಗಾಗಿ ಮುನಿರತ್ನ ಮತ್ತು ಜಿ.ಕೆ. ವೆಂಕಟೇಶ್ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ, ಅವರಿಂದ ಇದೇ ರೀತಿಯ ಗೂಂಡಾವರ್ತನೆ ಮುಂದುವರಿದರೆ, ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಶಾಸಕ ಮುನಿರತ್ನ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಮಹಿಳಾ ಸದಸ್ಯರನ್ನು ಅಗೌರವವಾಗಿ ಕಾಣುವುದನ್ನು ಬಿಟ್ಟು ಗೌರವ ನೀಡುವುದನ್ನು ಕಲಿತುಕೊಳ್ಳಲಿ ಎಂದು ಒತ್ತಾಯಿಸಿದರು.
ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿಯವರು ಮಾತನಾಡಿ, ಕಾಂಗ್ರೆಸ್ ಪಕ್ಷದ ಮಹಿಳಾ ಸದಸ್ಯೆ ಆಶಾ ಸುರೇಶ್ ಮೇಲೆ ದೌರ್ಜನ್ಯ ನಡೆಸಿರುವ ಮುನಿರತ್ನ ವಿರುದ್ಧ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗಳು ಕ್ರಮ ಕೈಗೊಳ್ಳದಿರುವುದು ಅಚ್ಚರಿಯ ಸಂಗತಿ ಎಂದು ವ್ಯಂಗ್ಯವಾಡಿದರು.
ಪ್ರತಿಭಟನೆಯಲ್ಲಿ ಶಾಸಕ ವಿಜಯಕುಮಾರ್, ನಂದೀಶ್ ರೆಡ್ಡಿ, ಅಶ್ವತ್ಥ್‌ನಾರಾಯಣ, ಪಾಲಿಕೆ ಸದಸ್ಯೆ ಪೂರ್ಣಿಮಾ, ಬೆಂಗಳೂರು ನಗರಾಧ್ಯಕ್ಷ ಸುಬ್ಬಣ್ಣ, ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ, ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಸೇರಿದಂತೆ, ಬಿಜೆಪಿಯ ಎಲ್ಲಾ ಮಹಿಳಾ ಸದಸ್ಯರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News