×
Ad

ಹಾವಿನ ವಿಷದ ಮೂಲಕ ಹೃದಯ ಸಂಬಂಧಿ ಕಾಯಿಲೆಗಳಿಗೆ ಔಷಧ

Update: 2016-01-13 23:21 IST

ಶಿವಮೊಗ್ಗ, ಜ. 13: ಮೂಲತಃ ಶಿವಮೊಗ್ಗದವರಾದ ಪ್ರಸ್ತುತ ಸಿಂಗಾಪುರದ ‘ನ್ಯಾಷನಲ್ ಯುನಿವರ್ಸಿಟಿ ಆಫ್ ಸಿಂಗಾಪುರ್, ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿರುವ ಆರ್.ಮಂಜುನಾಥ ಕಿಣಿಯವರು ಔಷಧ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆಯೊಂದನ್ನು ಕೈಗೊಂಡಿದ್ದಾರೆ. ಹಾವಿನ ವಿಷದ ಮೂಲಕ ಹೃದಯ ಸಂಬಂಧಿ ಕಾಯಿಲೆ ಗುಣಪಡಿಸುವ ಔಷಧವೊಂದರ ಪತ್ತೆ ಕಾರ್ಯ ನಡೆಸುತ್ತಿದ್ದಾರೆ. ಇವರ ಈ ಪ್ರಯತ್ನ ಇಡೀ ವಿಶ್ವದ ವೈದ್ಯಲೋಕದ ಗಮನ ಸೆಳೆದಿದೆ.
ಆರ್.ಮಂಜುನಾಥ ಕಿಣಿಯವರು ಕಾರ್ಯನಿಮಿತ್ತ ತಮ್ಮ ತವರೂರು ಶಿವಮೊಗ್ಗ ನಗರಕ್ಕೆ ಆಗಮಿಸಿದ್ದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವಿನ ವಿಷದ ಮೂಲಕ ಹೃದಯ ಸಂಬಂಧಿ ಕಾಯಿಲೆಗಳಿಗೆ ಔಷಧ ಕಂಡುಹಿಡಿಯುತ್ತಿರುವ ಸಂಶೋಧನೆಯ ಬಗ್ಗೆ ಮಾಹಿತಿ ಹಂಚಿಕೊಂಡರು. ಜೊತೆಗೆ ಶಿವಮೊಗ್ಗದಲ್ಲಿ ಕಳೆದ ತಮ್ಮ ಬಾಲ್ಯದ ಜೀವನದ ಕ್ಷಣಗಳನ್ನು ಮೆಲುಕು ಹಾಕಿದರು. ಯಶಸ್ವಿಯಾಗಿದೆ: ಈಗಾಗಲೇ ಹಾವಿನ ವಿಷದ ಮೂಲಕ ಮನುಷ್ಯನಲ್ಲಿ ಕಂಡುಬರುವ ಕೆಲ ರೋಗ-ರುಜಿನಗಳನ್ನು ಗುಣಪಡಿಸುವ ಔಷಧಗಳನ್ನು ಕಂಡುಹಿಡಿಯಲಾಗಿದೆ. ತಾವು ಹೃದಯ ಸಂಬಂಧಿ ಕಾಯಿಲೆ ಗುಣಪಡಿಸುವ ಔಷಧವನ್ನು, ಹಾವಿನ ವಿಷದ ಮೂಲಕ ಕಂಡುಹಿಡಿಯುತ್ತಿದ್ದೇನೆ. ಈಗಾಗಲೇ ಸಂಶೋಧನೆ ಪ್ರಾರಂಭಗೊಂಡಿದೆ. ಪ್ರಾರಂಭಿಕ ಹಂತದ ಯಶಸ್ಸು ಸಿಕ್ಕಿದೆ ಎಂದು ಮಾಹಿತಿ ನೀಡಿದರು. ಹಾವುಗಳ ವಿಷದಲ್ಲಿ ಹಲವು ಮಾದರಿಗಳಿವೆ. ಹಾಗೆಯೇ ಹಾವೊಂದರ ವಿಷದಲ್ಲಿ ಸುಮಾರು 250 ರಿಂದ 300 ‘ಫ್ರೊಟೀನ್’ ಅಂಶಗಳಿರುತ್ತವೆ. ಇದರಲ್ಲಿ ಒಂದು ‘ಟಾಕ್ಸಿನ್’ ಅಂಶದ ಮೂಲಕ ಹೃದಯ ಸಂಬಂಧಿ ಕಾಯಿಲೆಗಳಿಗೆ ಔಷಧ ಕಂಡುಹಿಡಿಯುವ ಪ್ರಯತ್ನ ನಡೆಸುತ್ತಿದ್ದೇನೆ ಎಂದು ವಿವರಣೆ ನೀಡಿದರು. ತಾವು ಕೈಗೊಂಡಿರುವ ಈ ಸಂಶೋಧನೆ ಪೂರ್ಣಗೊಳ್ಳಬೇಕಾದರೆ ಸುಮಾರು 25 ವಿವಿಧ ಹಂತದ ಪರೀಕ್ಷೆಗಳನ್ನು ನಡೆಸಬೇಕಾಗಿದೆ. ಈಗಾಗಲೇ 15 ಹಂತದ ಪರೀಕ್ಷೆಗಳನ್ನು ನಡೆಸಿದ್ದು, ಎಲ್ಲ ಪರೀಕ್ಷೆಗಳು ಯಶಸ್ವಿಯಾಗಿವೆ. ಸಕಾರಾತ್ಮಕ ಫಲಿತಾಂಶ ಹೊರಬಂದಿದೆ. ಇದು ತಮ್ಮಲ್ಲಿ ಹೊಸ ಆತ್ಮವಿಶ್ವಾಸ ಮೂಡುವಂತೆ ಮಾಡಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಇತರ ಹಂತಗಳ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇನೆ. ಎಲ್ಲ ಪರೀಕ್ಷೆ ಪೂರ್ಣಗೊಂಡು ಸಕಾರಾತ್ಮಕ ಫಲಿತಾಂಶ ಹೊರಬಂದರೆ, ನೀತಿ-ನಿಯಮಾವಳಿಗಳಿಗೆ ಅನುಗುಣವಾಗಿ ಔಷಧವನ್ನು ಮಾರುಕಟ್ಟೆಗೆ ಬಿಡುಗಡೆ ವಾಡುತ್ತೇನೆ ಎಂದು ಹೇಳಿದ್ದಾರೆ. ಹಾವಿನ ವಿಷದ ಮೂಲಕ ತಾವು ಕಂಡುಹಿಡಿಯುತ್ತಿರುವ ಹೊಸ ಔಷಧವು ರಕ್ತ ಹೆಪ್ಪುಗಟ್ಟುವಿಕೆ, ಬೈಪಾಸ್ ಸರ್ಜರಿ, ಹೃದಯ ವೈಫಲ್ಯ ಹಾಗೂ ಸಕ್ಕರೆ ಕಾಯಿಲೆಯಿಂದ ದೃಷ್ಟಿ ಹೀನದ ವೇಳೆ ಬಳಸುವಂತದ್ದಾಗಿದೆ. ಸಾಕಷ್ಟು ಪರಿಣಾಮಕಾರಿಯಾದುದ್ದಾಗಿದೆ ಎಂದು ಮಾಹಿತಿ ನೀಡಿದರು. ಹಿನ್ನೆಲೆ: ತಾವು ಮೂಲತಃ ಶಿವಮೊಗ್ಗ ನಗರದ ಬಸವನಗುಡಿ ಬಡಾವಣೆಯಲ್ಲಿ ಹುಟ್ಟಿ ಬೆಳೆದಿದ್ದೇನೆ. ತಾಯಿ ಅನುಸೂಯಾ ಬಾಯಿಯವರು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಬಾಲ್ಯದ ವಿದ್ಯಾಭ್ಯಾಸವನ್ನು ಶಿವಮೊಗ್ಗದಲ್ಲಿಯೇ ನಡೆಸಿದ್ದೇನೆ. ಎಂಎಸ್ಸಿ, ಪಿಎಚ್‌ಡಿ ಸೇರಿದಂತೆ ಹಲವು ಪದವಿಗಳನ್ನು ಸಂಪಾದಿಸಿದ್ದೇನೆ. ಹಲವು ದೇಶಗಳಿಗೆ ಭೇಟಿ ನೀಡಿದ್ದೇನೆ. ಪ್ರಸ್ತುತ ಸಿಂಗಾಪೂರದ ನ್ಯಾಷನಲ್ ಯುನಿವರ್ಸಿಟಿ ಆಫ್ ಸಿಂಗಾಪುರ್‌ದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದೇನೆ ಎಂದು ಹೇಳಿದರು. ‘ಇತ್ತೀಚೆಗೆ ಮೈಸೂರಿನಲ್ಲಿ ನಡೆದ ವಿಜ್ಞಾನ ಸಮ್ಮೇಳನದಲ್ಲಿ ಭಾಗವಹಿಸಲು ಸಿಂಗಾಪೂರದಿಂದ ಆಗಮಿಸಿದ್ದೆ. ಹಾಗೆಯೇ ಹುಟ್ಟಿ ಬೆಳೆದ ಶಿವಮೊಗ್ಗಕ್ಕೆ ಬಂದು ಇಲ್ಲಿರುವ ಸ್ನೇಹಿತರು, ಒಡನಾಡಿಗಳು, ಸಂಬಂಧಿಕರನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದೇನೆ. ಅವಕಾಶ ಸಿಕ್ಕಾಗಲೆಲ್ಲ ಶಿವಮೊಗ್ಗಕ್ಕೆ ಬರುತ್ತೇನೆ. ಇದು ನನ್ನ ನೆಚ್ಚಿನ ನಗರವಾಗಿದೆ’ ಎಂದು ಆರ್.ಮಂಜುನಾಥ ಕಿಣಿಯವರು ಇದೇ ಸಂದರ್ಭದಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News