8 ಸಾವಿರ ಕಿ.ಮೀ. ರಾಜ್ಯ ಹೆದ್ದಾರಿ ಮೇಲ್ದರ್ಜೆಗೆ: ಸಚಿವ ಮಹದೇವಪ್ಪ

Update: 2016-01-14 17:38 GMT

ಬೆಂಗಳೂರು, ಜ. 14: ಕೇಂದ್ರ ಸರಕಾರ ಪ್ರಸಕ್ತ ವರ್ಷ 1,656 ಕಿ.ಮೀ ರಾಜ್ಯ ಹೆದ್ದಾರಿಯನ್ನು (ಎಸ್.ಎಚ್) ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಸಮ್ಮತಿಸಿದೆ. ಇದರಿಂದಾಗಿ ಕರ್ನಾಟಕದ 8ಸಾವಿರ ಕಿ.ಮೀ. ಉದ್ದದ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ-52ರಲ್ಲಿ ಸಿದ್ದಾಪುರವನ್ನು ಸಂಪರ್ಕಿಸುವ ಯಲ್ಲಾಪುರ ಜಂಕ್ಷನ್‌ನಿಂದ ತಾಳಗುಪ್ಪ ಮತ್ತು ಭಟ್ಕಳ ನಡುವಿನ 219 ಕಿ.ಮೀ, ರಾಷ್ಟ್ರೀಯ ಹೆದ್ದಾರಿ-48ರಿಂದ 167ನ್ನು ಸಂಪರ್ಕಿಸುವ ಬಾಲಗಕೋಟೆಯಿಂದ ರಾಯಚೂರು ನಡುವಿನ 336 ಕಿ.ಮೀ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಯಾಗಿ ಕೇಂದ್ರ ಸರಕಾರ ಘೋಷಿಸಿದೆ ಎಂದರು.
ತುಮಕೂರು, ಕೊರಟಗೆರೆ, ಪಾವಗಡ, ಕಲ್ಯಾಣದುರ್ಗದಿಂದ ಆಂಧ್ರದ ವೇತರಾಲ ನಡುವಿನ 95 ಕಿ.ಮೀ., ರಾಮನಗರದಿಂದ ಸದಾಶಿವ ಘಡ ನಡುವಿನ 118ಕಿ.ಮೀ., ದಾವಣಗೆರೆ-ಚನ್ನಗಿರಿ ನಡುವಿನ 60ಕಿ.ಮೀ., ಚಿತ್ರದುರ್ಗದಿಂದ ಚಳ್ಳಕೆರೆ- ಪಾವಗಡದಿಂದ ಪೆನಕೊಂಡ ನಡುವಿನ 120ಕಿ.ಮೀ. ರಸ್ತೆಯನ್ನು ಮೇಲ್ದರ್ಜೆ ಗೇರಿಸಲು ಕೇಂದ್ರ ಒಪ್ಪಿಗೆ ನೀಡಿದೆ ಎಂದು ಮಹದೇವಪ್ಪ ತಿಳಿಸಿದರು.
ಕಲಬುರಗಿಯಿಂದ ಹುಮ್ನುಬಾದ್ ನಡುವಿನ 64 ಕಿ.ಮೀ., ಸಂಕೇಶ್ವರದಿಂದ ನರಗುಂದ ನಡುವಿನ 175ಕಿ.ಮೀ., ಹಾವೇರಿಯಿಂದ ಮೊಳಕಾಲ್ಮೂರು ನಡುವಿನ 247ಕಿ.ಮೀ., ಕಾಳೇಪೇಲಾದಿಂದ ಮೈಸೂರು ನಡುವಿನ 103ಕಿ.ಮೀ., ಚಿಂತಾಮಣಿಯಿಂದ ಚೆನ್ನೂರು, ರಾಯತೆರವು ಮತ್ತು ತಾನಕಲ್ ನಡುವಿನ 55ಕಿ.ಮೀ., ಮೊಳಕಾಲ್ಮೂರು, ಅನಂತಪುರಂ ನಡುವಿನ 12ಕಿ.ಮೀ. ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸಿ ಕೇಂದ್ರ ಸರಕಾರದ ಒಪ್ಪಿಗೆ ನೀಡಿದೆ ಎಂದರು.
ಮೈಸೂರು-ಬೆಂಗಳೂರು, ಮಳವಳ್ಳಿ ಮತ್ತು ಖಾನಾಪುರ- ಯಲ್ಲಾಪುರ ಈ ಎರಡೂ ರಸ್ತೆಯ ನಡುವೆ ತಲಾ 50 ಕಿ.ಮೀ. ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದ ಅವರು, ಶೀಘ್ರದಲ್ಲೇ ಅಂಗೀಕಾರ ದೊರೆಯುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶದಲ್ಲೆ ಪ್ರಥಮ: ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ 6,432 ಕಿ.ಮೀ ಉದ್ದದ ರಸ್ತೆ ರಾಷ್ಟ್ರೀಯ ಹೆದ್ದಾರಿಯಿದ್ದು, ಪ್ರಸಕ್ತ ಸಾಲಿನಲ್ಲಿ 1,656 ಕಿ.ಮೀ ಹೊಸದಾಗಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತನೆಗೆ ಕೇಂದ್ರ ಸರಕಾರ ಸಮ್ಮತಿಸಿದೆ. ಹೀಗಾಗಿ ರಾಜ್ಯದಲ್ಲಿ ದೇಶದಲ್ಲೇ ಅತ್ಯಂತ ಹೆಚ್ಚು 8 ಸಾವಿರ ಕಿ.ಮೀ ಉದ್ದದ ರಸ್ತೆ ರಾಷ್ಟ್ರೀಯ ಹೆದ್ದಾರಿ ಇದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News