×
Ad

ಫೆಬ್ರವರಿಯಿಂದ ಶಿರಾಡಿಘಾಟ್ ಎರಡನೆ ಹಂತದ ಕಾಮಗಾರಿ: ಸಚಿವ ಮಹದೇವಪ್ಪ

Update: 2016-01-14 23:08 IST

ಬೆಂಗಳೂರು, ಜ. 14: ಶಿರಾಡಿಘಾಟ್‌ನ ರಸ್ತೆಯ ಎರಡನೆ ಹಂತದ ಕಾಂಕ್ರಿಟೀಕರಣ ಕಾಮಗಾರಿಯನ್ನು ಜನವರಿ ಕೊನೆ ಅಥವಾ ಫೆಬ್ರವರಿ ಮೊದಲನೆ ವಾರದಲ್ಲಿ ಕೈಗೆತ್ತಿಕೊಳ್ಳಲು ಚಿಂತನೆ ನಡೆಸಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈ ಕಾಮಗಾರಿಗೆ ಕೇಂದ್ರ ಪರಿಸರ ಇಲಾಖೆ ಅನುಮತಿಗೆ ತಜ್ಞರ ಸಮಿತಿ ಅಧ್ಯಯನ ನಡೆಸಿದ್ದು ಅನುಮತಿ ದೊರೆಯಲಿದೆ. ಆ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಕಾಮಗಾರಿ ಆರಂಭಿಸುವ ಸಾಧ್ಯತೆಗಳಿವೆ ಎಂದರು.
ರಸ್ತೆ ಬಂದ್: ಎರಡನೆ ಹಂತದ ಕಾಮಗಾರಿ ಹಿನ್ನೆಲೆಯಲ್ಲಿ ಆ ರಸ್ತೆಯನ್ನು ಬಂದ್ ಮಾಡಲಾಗುವುದು. ಮೇ ಅಥವಾ ಜೂನ್ ವೇಳೆಗೆ ಮಳೆಗಾಲ ಆರಂಭಗೊಳ್ಳುವ ವೇಳೆಯೊಳಗಾಗಿ ಕಾಂಕ್ರಿಟೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶಿರಾಡಿಘಾಟ್‌ನ ಎರಡನೆ ಹಂತದ ಕಾಂಕ್ರಿಟೀಕರಣ ಕಾಮಗಾರಿಗೆ ಒಟ್ಟು 90 ಕೋಟಿ ರೂ.ವೆಚ್ಚವಾಗಲಿದ್ದು, ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾದ ಶಿರಾಡಿಘಾಟ್ ರಸ್ತೆಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
 ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಆರು ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಸಮಗ್ರ ಕ್ರಿಯಾ ಯೋಜನೆ ಸಿದ್ಧಗೊಂಡಿದ್ದು, ಮೂರು ತಿಂಗಳ ಒಳಗೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.
ಈ ರಸ್ತೆ ಅಭಿವೃದ್ಧಿಗೆ ಫೆ.3ರಂದು ನಡೆಯಲಿರುವ 2016ರ ಇನ್ವೆಸ್ಟ್ ಕರ್ನಾಟಕ ಸಮ್ಮೇಳನಕ್ಕಾಗಿ ಆಗಮಿಸುವ ಕೇಂದ್ರ ಸಚಿವರು ಚಾಲನೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದ ಅವರು, ಅದೇ ರೀತಿ ಹುಬ್ಬಳ್ಳಿ-ವಿಜಯಪುರ ನಡುವಿನ 193 ಕಿ.ಮೀ.ಉದ್ದದ ರಸ್ತೆಯನ್ನು 7ರಿಂದ 10 ಮೀಟರ್ ವಿಸ್ತರಣೆ ಮಾಡಲು ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಚನ್ನೈ-ಮಂಗಳೂರು ನಡುವಿನ ಬಂದರು ಸಂಪರ್ಕ ಸುಧಾರಣೆಗೆ ಅಗತ್ಯವಿರುವ ಎಲ್ಲ ಯೋಜನೆಗಳನ್ನು ರೂಪಿಸುವುದು ಎಂದ ಮಹದೇವಪ್ಪ, ಬೆಂಗಳೂರು ನಗರದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಸುಧಾರಣೆಗೆ ಬಿಡುಗಡೆಯಾಗಿರುವ ಅನುದಾನದ ಸದ್ಬಳಕೆಗೆ ಸಿದ್ಧತೆ ನಡೆದಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News