ಕಾಲಮಿತಿಯಲ್ಲಿ ಜನರಿಗೆ ಸವಲತ್ತು ಕಲ್ಪಿಸಿ; ಅಧಿಕಾರಿಗಳಿಗೆ ಸಚಿವೆ ಉಮಾಶ್ರೀ ತಾಕೀತು
ಬೆಂಗಳೂರು, ಜ. 14: ಇಲಾಖೆಯ ಯೋಜನೆಗಳನ್ನು ಕಾಲಮಿತಿಯಲ್ಲಿ ಜನರಿಗೆ ತಲುಪಿಸುವ ಹೊಣೆ ಅಧಿಕಾರಿಗಳದ್ದಾಗಿದ್ದು, ಈ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದ ಅಧಿಕಾರಿಗಳು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ತಾಕೀತು ಮಾಡಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರಕಾರ ಜನರ ಕಲ್ಯಾಣಕ್ಕಾಗಿ ಇಲಾಖೆಯಲ್ಲಿ ಅನೇಕ ಯೋಜನೆಗಳನ್ನು ರೂಪಿಸಿದೆ. ಆದರೆ, ಇವುಗಳನ್ನು ನಿಗದಿತ ಕಾಲಮಿತಿಯಲ್ಲಿ ಜನರಿಗೆ ತಲುಪಿಸುವ ಹೊಣೆ ಅಧಿಕಾರಿಗಳದ್ದು ಎಂದರು.
ಆ ಕಾರ್ಯದಲ್ಲಿ ವಿಫಲರಾಗುವ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ವಿಶೇಷವಾಗಿ ಆ್ಯಸಿಡ್ ದಾಳಿಗೆ ಒಳಗಾದ ಹಾಗೂ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಪರಿಹಾರ ಒದಗಿಸುವ ‘ಸ್ಥೈರ್ಯ’ ಯೋಜನೆಯಲ್ಲಿ ವಿಳಂಬವಾಗಬಾರದು ಎಂದು ತಾಕೀತು ಮಾಡಿದರು.
ಸಂತ್ರಸ್ತ ಮಹಿಳೆಯರ ಬಗ್ಗೆ ವಿಶೇಷ ಕಾಳಜಿಯಿಂದ ಕೆಲಸ ಮಾಡಬೇಕು. ಈ ಯೋಜನೆಯಲ್ಲಿ ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಗರಿಷ್ಠ 2ಲಕ್ಷ ರೂ. ಹಾಗೂ ದೌರ್ಜನ್ಯಕ್ಕೆ ಒಳಗಾದ ಮಹಿಳೆ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ 1ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಅನುಷ್ಠಾನಗಳ ಬಗ್ಗೆ ಪರಿಶೀಲನಾ ಸಭೆ ನಡೆಸಿದರು. ಮಾರ್ಚ್ ಅಂತ್ಯದ ವೇಳೆಗೆ ನಿಗದಿತ ಗುರಿ ತಲುಪಲು ಅಧಿಕಾರಿಗಳು ತೀವ್ರಗತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕೆಲಸ ಮಾಡಬೇಕೆಂದು ಸಚಿವೆ ಉಮಾಶ್ರೀ ಅಧಿಕಾರಿಗಳಿಗೆ ಇದೇ ವೇಳೆ ಕಿವಿಮಾತು ಹೇಳಿದರು.