×
Ad

ಶಬೀರ್ ಭಟ್ಕಳ್‌ಗೆ ಜಾಮೀನು ನಿರಾಕರಣೆ

Update: 2016-01-14 23:13 IST

ಬೆಂಗಳೂರು, ಜ.14: ಶಂಕಿತ ಉಗ್ರ ಶಬೀರ್ ಭಟ್ಕಳ್‌ಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
 ರಿಯಾಜ್ ಭಟ್ಕಳ್‌ಗೆ ಸಹಾಯ ಹಾಗೂ ಮಾಹಿತಿ ನೀಡಿದ ಆರೋಪದ ಮೇಲೆ 2008ರಲ್ಲಿ ಮಂಗಳೂರಿನ ಉಳ್ಳಾಲ ಪೊಲೀಸ್‌ರಿಂದ ಬಂಧನಕ್ಕೆ ಒಳಗಾಗಿದ್ದ ಶಬೀರ್ ಭಟ್ಕಳ್ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.
 ಗುರುವಾರ ಈತನ ಅರ್ಜಿಯನ್ನು ವಜಾಗೊಳಿಸಿದ ನ್ಯಾ.ಎ.ವಿ.ಚಂದ್ರಶೇಖರ್ ಅವರಿದ್ದ ಏಕಸದಸ್ಯ ಪೀಠ, ಶಬೀರ್ ಭಟ್ಕಳ್ ವಿರುದ್ಧ ಇನ್ನೂ ಕೆಲ ಪ್ರಕರಣಗಳು ದಾಖಲಾಗಿವೆ. ಆ ಪ್ರಕರಣಗಳ ವಿಚಾರಣೆಗೆ ಪೊಲೀಸರಿಗೆ ಈತನ ಆವಶ್ಯಕತೆ ಇದೆ. ಹೀಗಾಗಿ ಈ ಹಂತದಲ್ಲಿ ಜಾಮೀನು ನೀಡಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟು ಜಾಮೀನು ನಿರಾಕರಿಸಿತು.
    ವಿಚಾರಣೆ ವೇಳೆ ಸರಕಾರಿ ಅಭಿಯೋಜಕರಾದ ನಾಗೇಶ್ವರಪ್ಪ ವಾದಿಸಿ, ಶಬೀರ್ ಭಟ್ಕಳ್ ವಿರುದ್ಧ ಕಾನೂನುಬಾಹಿರ ಚಟು ವಟಿಕೆಗಳ (ನಿಯಂತ್ರಣ) ಕಾಯ್ದೆ ಮತ್ತು ಸ್ಫೋಟಕ ಕಾಯ್ದೆ ಸೆಕ್ಷನ್ 9(ಬಿ), ಭಾರತೀಯ ಸ್ಫೋಟಕ ಸಾಮಗ್ರಿಗಳ ಕಾಯ್ದೆ ಸೆಕ್ಷನ್ 5 ಹಾಗೂ 6, ಸಶ್ತ್ರಗಳ ಕಾಯ್ದೆ ಸೆಕ್ಷನ್ 3 ಮತ್ತು 25 ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಅಡಿ ಹಲವು ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಹೀಗಾಗಿ, ಜಾಮೀನು ನೀಡಬಾರದು. ಜಾಮೀನು ನೀಡಿದರೆ ವಿಚಾರಣೆ ಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದರು. ಇದನ್ನು ಪರಿಗಣಿಸಿದ ಪೀಠ ಶಬೀರ್‌ಗೆ ಜಾಮೀನು ನೀಡಲು ನಿರಾಕರಿಸಿತು.
ಅಹ್ಮದಾಬಾದ್, ಬೆಂಗಳೂರು, ಜೈಪುರ, ಹೊಸದಿಲ್ಲಿ ಬಾಂಬ್ ಸ್ಫೋಟ ಪ್ರಕರಣಗಳ ಸಂಬಂಧ ಮಂಗಳೂರಿನ ಉಳ್ಳಾಲ ಪೊಲೀಸರು ರಿಯಾಜ್ ಭಟ್ಕಳ್ ಮನೆಯ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಕೆಲ ಮೊಬೈಲ್‌ಗಳು ಸಿಕ್ಕಿದ್ದವು. ಇವುಗಳಿಂದ ರಿಯಾಜ್ ಭಟ್ಕಳ್‌ಗೆ ಶಬೀರ್ ಭಟ್ಕಳ್ ಸೇರಿದಂತೆ ಮೂರ್ನಾಲ್ಕು ಜನ ನೆರವು ನೀಡಿರುವ ವಿಷಯ ಬೆಳಕಿಗೆ ಬಂದಿತ್ತು ಎನ್ನಲಾಗಿದೆ.
  ಈ ಸಂಬಂಧ ಶಬೀರ್ ಭಟ್ಕಳ್‌ನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದರು. 2008ರಲ್ಲಿ ಸೆ.4ರಂದು ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಮಂಗಳೂರಿನ ಮೂರನೆ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಶಬೀರ್‌ಗೆ ಜಾಮೀನು ನೀಡಲು ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News