ಉತ್ತಮ ಕಾನೂನುಗಳಿವೆ, ಅನುಷ್ಠಾನಗೊಳ್ಳುತ್ತಿಲ್ಲ: ಡಿ.ಎಚ್. ಶಂಕರಮೂರ್ತಿ
ಬೆಂಗಳೂರು,ಜ. 14 : ರಾಜ್ಯದಲ್ಲಿ ಮತ್ತು ದೇಶದಲ್ಲಿ ಉತ್ತಮ ಕಾನೂನು ಗಳಿವೆ. ಆದರೆ ಆ ಕಾನೂನುಗಳು ಅನುಷ್ಠಾನಗೊಳ್ಳುತ್ತಿಲ್ಲ ಎಂದು ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಪಂಚಾಯತ್ ಪರಿಷತ್‌ನಿಂದ ನಗರದ ಗಾಂಧಿ ಭವನದಲ್ಲಿಂದು ಆಯೋಜಿಸಿದ್ದ, ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ನೂತನ ಸದಸ್ಯರಿಗೆ ಮತ್ತು ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯನ್ನು ತಿದ್ದುಪಡಿ ಮಾಡಲು ಶ್ರಮಿಸಿದ ರಮೇಶ್ ಕುಮಾರ್ ನೇತೃತ್ವದ ಸಮಿತಿಯ ಸದಸ್ಯರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮಲ್ಲಿ ಉತ್ತಮವಾದ ಕಾನೂನು ಗಳಿವೆ. ಆದರೆ ಆ ಕಾನೂನುಗಳನ್ನು ಅನುಷ್ಠಾನಗೊಳಿಸುವಲ್ಲಿ ತೊಡಕು ಗಳಾಗುತ್ತಿವೆ. ಸಂಬಂಧಪಟ್ಟವರು ಜವಾ ಬ್ದಾರಿಯುತವಾಗಿ ವರ್ತಿಸಿದರೆ, ಉತ್ತಮ ಕಾನೂನುಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಹಳ್ಳಿ ಜನರು ನಗರಗಳಿಗೆ ವಲಸೆ ಬರುತ್ತಿರುವುದರಿಂದ ಹಳ್ಳಿಗಳಲ್ಲಿ ಯುವಜನರಿಲ್ಲದೆ ವಯಸ್ಸಾದವರ ಗ್ರಾಮಗಳಂತಾಗಿವೆ. ವಲಸೆ ಬಂದ ಜನ ನಗರಗಳಲ್ಲಿ ಹಲವಾರು ಬಗೆಯ ಸಮಸ್ಯೆಗಳಿಂದ ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಹಳ್ಳಿಗಳ ದೇಶ ಎಂದು ಗಾಂಧೀಜಿ ಕಂಡಿದ್ದ ಕನಸನ್ನು ನನಸು ಮಾಡಬೇಕಾದರೆ ಸಾಮಾನ್ಯ ಜನರಿಗೆ ಕೆಲವೊಂದು ಜವಾಬ್ದಾರಿ ಮತ್ತು ಹಕ್ಕುಗಳನ್ನು ನೀಡಬೇಕು. ಜೊತೆಗೆ ಅವರಿಗೆ ಸಾಮಾಜಿಕ ಸ್ಥಿತಿಗತಿ ಮತ್ತು ಅವರ ಜವಾಬ್ದಾರಿಗಳ ಬಗ್ಗೆ ಅರ್ಥ ಮಾಡಿಸಬೇಕು. ಈ ನಿಟ್ಟಿನಲ್ಲಿ ಹಳ್ಳಿ ಮಟ್ಟದಲ್ಲಿ ಚರ್ಚೆಗಳನ್ನು ಪ್ರಾರಂಭಿಸಬೇಕು. ಈ ಚರ್ಚೆಗಳಲ್ಲಿ ಅಭಿವೃದ್ಧಿಯನ್ನು ಭಾಷಣಕ್ಕೆ ಮಾತ್ರ ಸೀಮಿತಗೊಳಿಸದೆ ಎಲ್ಲರೂ ಸೇರಿ ಕೆಲಸ ಮಾಡಬೇಕಿದೆ ಎಂದು ಅವರು ತಿಳಿಸಿದರು.
ನಂತರ ಮಾತನಾಡಿದ ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ ಪಾಟೀಲ್, ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಪ್ರತಿನಿಧಿ ಗಳು ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗದೆ, ಇಡೀ ದೇಶಕ್ಕೆ ತಮ್ಮ ಸೇವೆಯನ್ನು ವಿಸ್ತರಿಸಬೇಕು. ಸರಕಾರ ಜಾರಿಗೆ ತರುವ ಕಾನೂನನ್ನು ಅನು ಷ್ಠಾನಗೊಳಿಸಲು ನಿರ್ಲಕ್ಷ ತೋರುವ ಶಾಸಕರು ಅಥವಾ ಅಧಿಕಾರಿಗಳನ್ನು ಪ್ರಶ್ನಿ ಸುವಂತಹ ಹಕ್ಕನ್ನು ವಿಧಾನ ಪರಿಷತ್ತಿಗೆ ನೀಡಲಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಬದುಕನ್ನು ಹತ್ತಿರದಿಂದ ಕಂಡ ಹಲವಾರು ವ್ಯಕ್ತಿಗಳು ಸೇರಿ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯನ್ನು ಕರ್ನಾಟಕ ಗ್ರಾಮ್ ಸ್ವರಾಜ್ ಕಾಯ್ದೆ ಎಂದು ತಿದ್ದುಪಡಿ ಮಾಡಿ ನೀಡಿದ್ದಾರೆ. ಇದು ರಾಷ್ಟ್ರ ಮಟ್ಟದಲ್ಲಿಯೇ ಮೊದಲ ತಿದ್ದುಪಡಿ ಕಾಯ್ದೆಯಾಗಿದೆ. ಇದು ಕಾನೂನು ಆಗುವವರೆಗೂ ನೀವು ಸಾಕ್ಷಿ ಪ್ರಜ್ಞೆ ಯಾಗಿರುತ್ತೀರ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ವಿ. ರಾಜಶೇಖರನ್, ಪರಿಷತ್ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಪರಿಷತ್ ಮಹಿಳಾ ಘಟಕ ಅಧ್ಯಕ್ಷೆ ಕಮಲಮ್ಮ, ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಎಲ್. ಗೋಪಾಲಕೃಷ್ಣಗೌಡ, ಗಾಂಧಿ ಸ್ಮಾರಕ ಅಧ್ಯಕ್ಷ ಹೋ. ಶ್ರೀನಿವಾಸಯ್ಯ, ಕೊಪ್ಪಳ ಶಾಸಕ ಹಿಟ್ನಾಳ್ ಹಾಗೂ ನೂತನ ವಿಧಾನ ಪರಿಷತ್ ಸದಸ್ಯರು ಮತ್ತು ಪಂಚಾಯತ್ ರಾಜ್ ಕಾಯ್ದೆ ತಿದ್ದು ಪಡಿಗಾಗಿ ಶ್ರಮಿಸಿದ ರಮೇಶ್‌ಕುಮಾರ್ ನೇತೃತ್ವದ ಸಮಿತಿ ಸದಸ್ಯರು ಉಪಸ್ಥಿತರಿದ್ದರು.