ಅನಧಿಕೃತ ಮದ್ಯ ಮಾರಾಟಕ್ಕೆ ತಡೆ: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

Update: 2016-01-14 18:03 GMT

ಬೆಂಗಳೂರು, ಜ. 14: ನೆರೆ ರಾಜ್ಯಗಳಿಂದ ಅಕ್ರಮವಾಗಿ ಕರ್ನಾಟಕ ರಾಜ್ಯಕ್ಕೆ ಬರುತ್ತಿರುವ ಅನಧಿಕೃತ ಮದ್ಯವನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಅಬಕಾರಿ, ಕಂದಾಯ, ವಾಣಿಜ್ಯ ತೆರಿಗೆ, ಸಾರಿಗೆ, ಮುದ್ರಾಂಕ ಶುಲ್ಕ ಇಲಾಖೆ ಅಧಿಕಾರಿಗಳೊಂದಿಗೆ ಇಡೀ ದಿನ ಸಭೆ ನಡೆಸಿದ ಸಿದ್ದರಾಮಯ್ಯ, ವಿವಿಧ ಇಲಾಖೆಗಳಿಂದ ತೆರಿಗೆ ಸಂಗ್ರಹದ ವಿವರಗಳನ್ನು ಪಡೆದರು.
2015-16ನೆ ಸಾಲಿಗೆ ಅಬಕಾರಿ ಇಲಾಖೆಗೆ 15,200 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ನೀಡಿದ್ದು, ಈವರೆಗೂ 11 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹಿಸಿದ್ದು, ಶೇ.73 ರಷ್ಟು ಪ್ರಗತಿಯಾಗಿದೆ. ಜೂನ್ ವೇಳೆಗೆ ನಿಗದಿತ ಗುರಿಮುಟ್ಟಬೇಕೆಂದು ಸೂಚಿಸಿದರು.
ನೆರೆಯ ಆಂಧ್ರದಲ್ಲಿ ತಯಾರಾಗುವ ‘999’ ಎಂಬ ಮದ್ಯ ಕರ್ನಾಟಕ ರಾಜ್ಯದಲ್ಲಿನ ಮದ್ಯಕ್ಕಿಂತ ಕಡಿಮೆ ಬೆಲೆಗೆ ದೊರೆಯುತ್ತಿದ್ದು, ಗಡಿಭಾಗದಲ್ಲಿ ಅದರ ವಹಿವಾಟು ಹೆಚ್ಚಿದೆ. ಹೀಗಾಗಿ ಕರ್ನಾಟಕದ ಮದ್ಯ ಮಾರಾಟಕ್ಕೆ ಹಿನ್ನಡೆಯಾಗಿದ್ದು, ತೆರಿಗೆ ಸಂಗ್ರಹದಲ್ಲಿಯೂ ಖೋತಾ ಆಗಲಿದೆ ಎಂದು ತಿಳಿಸಿದರು.
ಆಯಾ ರಾಜ್ಯಗಳಲ್ಲಿ ಸಿದ್ಧಪಡಿಸುವ ಮದ್ಯ ಅದೇ ರಾಜ್ಯದಲ್ಲೇ ಮಾರಾಟ ಆಗಬೇಕೆಂಬ ನಿಯಮಗಳಿವೆ. ಆದರೂ, ಗಡಿಭಾಗದಲ್ಲಿ ನೆರೆ ರಾಜ್ಯಗಳಿಂದ ಅಕ್ರಮ ಮದ್ಯ ರಾಜ್ಯಕ್ಕೆ ಬರುತ್ತಿದೆ. ಯಾವುದೇ ಕಾರಣಕ್ಕೂ ನೆರೆ ರಾಜ್ಯದ ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಡಿ ಎಂದು ಸೂಚಿಸಿದರು.

ಹೊಸ ಮದ್ಯದಂಗಡಿಗೆ ಚಿಂತನೆ
2011ರ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯದಲ್ಲಿ 1,560 ಹೊಸ ಮದ್ಯದಂಗಡಿ ಪರವಾನಿಗೆ ನೀಡಲು ರಾಜ್ಯ ಸರಕಾರ ಚಿಂತನೆ ನಡೆಸಿದ್ದು, ಇದರಿಂದ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಬೀಳಲಿದೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News